- ಬಂಟ್ವಾಳ: ಆಸ್ಟ್ರೇಲಿಯಾದ ಸಿಡ್ನಿ ಟೆಕ್ಕಿ ಪ್ರಭಾ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಹುಟ್ಟೂರು ಅಮ್ಟೂರಿನಲ್ಲಿ ಭಾನುವಾರ ಸಂಜೆ ನಡೆಯಿತು.
ಮಂಗಳೂರು ವಿಮಾನ ನಿಲ್ದಾಣದಿಂದ ಅಂಬ್ಯುಲೆನ್ಸ್ ಮೂಲಕ ಪ್ರಭಾ ಅವರ ಮೃತದೇಹವನ್ನು ಅಮ್ಟೂರಿನಲ್ಲಿರುವ ಮನೆ ನಂದಗೋಕುಲಕ್ಕೆ ತರಲಾಯಿತು. ಬಳಿಕ ಮೃತದೇಹವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು, ಗಣ್ಯರು ಭೇಟಿ ನೀಡಿ ಮೃತದೇಹದ ಅಂತಿಮ ದರ್ಶನ ಪಡೆದರು. ದೂರದೂರುಗಳಿಂದ ಬಂಧು ಮಿತ್ರರ ಆಗಮನದ ನಿರೀಕ್ಷೆಯಲ್ಲಿ ಸಂಜೆ 6 ಗಂಟೆಯವರೆಗೆ ಗಂಟೆಯವರೆಗೂ ಕಾಯಲಾಯಿತು.

ಅಂತಿಮ ನಮನ:
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಶಾಸಕರಾದ ಶಕುಂತಳಾ ಟಿ. ಶೆಟ್ಟಿ, ಮೊದಿನ್ ಬಾವ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಎ.ರುಕ್ಮಯ ಪೂಜಾರಿ, ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯ್ಕ್, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಪಂ ಮಾಜಿ ಅಧ್ಯಕ್ಷ ಕೆ.ಪದ್ಮನಾಭ ರೈ, ಸದಸ್ಯರಾದ ದಿನೇಶ್ ಅಮ್ಟೂರು, ಐಡಾ ಸುರೇಶ್, ಪ್ರಮುಖರಾದ ಅಜಿತ್ ಕುಮಾರ್ ರೈ ಮಾಲಾಡಿ, ಡಾ.ಕಮಲಾ ಪ್ರಭಾಕರ್ ಭಟ್, ಎ.ನೋಣಯ್ಯ ಪೂಜಾರಿ, ಪುರುಷೋತ್ತಮ ಗಟ್ಟಿ, ಅಬ್ಬಾಸ್ ಅಲಿ, ಜಿ.ಮಹಮ್ಮದ್ ಹನೀಫ್, ಮೊಗನಾಡರ್್ ದೇವ ಮಾತಾ ಚರ್ಚ್ ಧರ್ಮಗುರು ಮಥಾಯಿಸ್ ಪಿರೇರಾ, ಸಹಾಯಕ ಧರ್ಮ ಗುರು ಉದಯ ಕುಮಾರ್ ಫೆರ್ನಾಂಡಿಸ್, ಅಮ್ಟೂರು ಸಂತ ಅಂತೋನಿಯರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಸಿಸ್ಟರ್ ಇನೆಟ್ ಡಿಸೋಜ ಮತ್ತಿತರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು.
ಜನಸಾಗರ: ಪ್ರಭಾ ಶೆಟ್ಟಿ ಅವರಿಗೆ ಅಂತಿಮ ನಮನ ಸಲ್ಲಿಸಿ ಅಂತ್ಯ ಸಂಸ್ಕಾರ ವೀಕ್ಷಿಸಲು ಸಾವಿರಾರು ಮಂದಿ ಸಂಬಂಧಿಕರು, ಸಹಪಾಠಿಗಳು, ಸ್ನೇಹಿತರು, ಸ್ಥಳೀಯ ಗ್ರಾಮಸ್ಥರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ತಾಲ್ಲೂಕಿನ ಬಂಟರ ಸಂಘದ ಪದಾಧಿಕಾರಿಗಳು ನೆರೆದಿದ್ದರು.
ಕಂಬನಿ: ಮೃತದೇಹವನ್ನು ಅಂತಿಮ ಸಂಸ್ಕಾರ ನಡೆಸಲು ಕೊಂಡೊಯ್ಯುತ್ತಿದ್ದ ವೇಳೆ ಮೃತರ ತಂದೆ ಮಹಾಬಲ ಶೆಟ್ಟಿ, ತಾಯಿ ಸರೋಜಿನಿ ಶೆಟ್ಟಿ, ಪತಿ ಅರುಣ್ ಕುಮಾರ್, ಪುತ್ರಿ ಮೇಘನಾ, ಸಹೋದರರಾದ ಡಾ. ಶಂಕರ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ನಿತಿನ್ ಶೆಟ್ಟಿ, ಸಹೋದರಿ ಶುಭ ಶೆಟ್ಟಿ ಗೋಗರೆದು ಕಂಬನಿ ಮಿಡಿಯುತ್ತಿರುವ ದೃಶ್ಯ ಮನ ಕಲಕುವಂತಿತ್ತು.

ಅಂತ್ಯಸಂಸ್ಕಾರ:
ನಂದಗೋಕುಲ ನಿವಾಸದ ಎಡಭಾಗದಲ್ಲಿ ಇರುವ ಮಾವಿನ ಮರಗಳ ತೋಟದ ನಡುವೆ ಮಾವಿನ ಮರದ ಕಟ್ಟಿಗೆಯಿಂದ ರಚಿಸಲಾದ ಚಿತೆಯಲ್ಲಿ ಮೃತರ ಪತಿ ಅರುಣ್ ಕುಮಾರ್ ಅಗ್ನಿ ಸ್ಪರ್ಶ ನೀಡಿದರು.
ಭೇಟಿ:
ಉಪವಿಭಾಗಾಧಿಕಾರಿ ಡಾ.ಅಶೋಕ್, ತಹಶೀಲ್ದಾರ್ ಮಹಮ್ಮದ್ ಇಸಾಕ್, ಇನ್ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ, ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಕುಮಾರ್, ನಗರ ಠಾಣಾಧಿಕಾರಿ ನಂದ ಕುಮಾರ್ ಭೇಟಿ ನೀಡಿ, ಜನಸಂಚಾರ ಮತ್ತು ವಾಹನ ಸಂಚಾರ ಸುಗಮಗೊಳಿಸಲು ಶ್ರಮಿಸಿದರು.
–












