ಮೂಡುಬಿದಿರೆ : ಯಾವುದೇ ಕ್ರಷರ್ಗಳಿಗೆ ಅನುಮತಿ ನೀಡಬೇಕಾದರೆ ಕ್ರಷರ್ಗಿಂತ 500 ಮೀಟರ್ನೊಳಗೆ ಯಾವುದೇ ಶಾಲೆ, ಮನೆಗಳು ಇರಬಾರದೆಂದು ನಿಯಮವಿದೆ ಆದರೆ ನೆಲ್ಲಿಕಾರು ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಭಾವಿಗಳ ಕೈವಾಡ ಬಳಸಿ, ಕಾನೂನು ಮೀರಿ 200ಮೀಟರ್ನ ಮಿತಿಯೊಳಗೆ ಕ್ರಷರ್ಗೆ ಅನುಮತಿ ನೀಡಲಾಗಿದೆ ಇದರಲ್ಲಿ ಭ್ರಷ್ಟ ಅಧಿಕಾರಿಗಳ ಕೈವಾಡವೂ ಇದೆ ಈ ಬಗ್ಗೆ ಸೋಮವಾರದಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಜಲ್ಲಿ ಕ್ರಷರನ್ನು ರದ್ದುಗೊಳಿಸುವಂತೆ ಮನವಿ ನೀಡಲಾಗುವುದು ಎಂದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ, ಹಿಂದುಳಿದ ವಿಭಾಗ ಬೆಂಗಳೂರು ಇದರ ರಾಜ್ಯಾಧ್ಯಕ್ಷ ಶೈಲೇಶ್ ಪೂಜಾರಿ ಹೇಳಿದರು.

ಅಖಿಲ ಭಾರತ ದಲಿತ ಕ್ರಿಯಾ ಸಮಿತಿ, ಹಿಂದುಳಿದ ವಿಭಾಗ ದ.ಕ ಜಿಲ್ಲೆ ಇದರ ವತಿಯಿಂದ ಮುಗ್ರೋಡಿ ಜಲ್ಲಿ ಕೃಷರ್ ವಿರುದ್ಧ ಗ್ರಾಮಸ್ಥರು ಶುಕ್ರವಾರದಂದು ನೆಲ್ಲಿಕಾರು ಗ್ರಾ.ಪಂಚಾಯತ್ ಮುಂಭಾಗ ಕೈಗೊಂಡ ಅನಿರ್ದಿಷ್ಟಾವಧಿ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಬಾಳೆಕೋಡಿ ಕಾಶೀ ಕಾಲಭೈರಮೇಶ್ವರ ಕ್ಷೇತ್ರದ ಶಶಿಕಾಂತ ಮಣಿ ಸ್ವಾಮೀಜಿ ಮಾತನಾಡಿ ಗಣಿ ಅಧಿಕಾರಿಗಳು ಮುಗ್ರೋಡಿಯಲ್ಲಿ ಕ್ರಷರ್ ಮಾಡಲು ಅವಕಾಶ ನೀಡಿದ್ದಲ್ಲದೆ ಅಲ್ಲಿದ್ದ ಪುರತನ ಕಾಲದ ದೇವರ ಪಾದುಕೆಯನ್ನು ನಾಶ ಮಾಡಿದ್ದಾರೆ ಇದು ಅವರಿಗೆ ಶ್ರೇಯಸ್ಸಲ್ಲ. ಈ ಹೋರಾಟಕ್ಕೆ ತನ್ನ ಸಕ್ರೀಯ ಬೆಂಬಲವಿದೆ ಎಂದು ಹೇಳಿದರು.
ದಲಿತ ಕ್ರಿಯಾ ಸಮಿತಿಯ ಎಸ್.ಸಿ ವಿಭಾಗದ ರಾಜ್ಯಾಧ್ಯಕ್ಷ ಅಂಬರೀಷ್, ದಲಿತ ಕ್ರಿಯಾ ಸಮಿತಿಯ ರಾಜ್ಯ ಪ್ರ.ಕಾರ್ಯದರ್ಶಿ ಬಿ.ಆರ್.ಮುನಿರಾಜು, ಜಿಲ್ಲಾ ಉಪಾಧ್ಯಕ್ಷ ಜಗದೀಶ ಪಡ್ಪು, ರಾಜ್ಯ ಸಮಿತಿ ಸದಸ್ಯ ಎಲಿಮಲೆ ರಾಜೇಶ್ ಭಟ್, ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಅಪ್ರೋಜ್ಖಾನ್, ಮಂಗಳೂರು ತಾಲೂಕಿನ ಅಧ್ಯಕ್ಷ ಸಂದೀಪ್ ಸಾಲ್ಯಾನ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಮಿತಿಯ ಕರಾವಳಿ ವಿಭಾಗದ ಮುಖ್ಯಸ್ಥ ಶಿವಾನಂದ ಪಾಂಡ್ರು ಕಾರ್ಯಕ್ರಮ ನಿರೂಪಿಸಿದರು.

