ಬಂಟ್ವಾಳ: ನಗರಾಭಿವೃದ್ಧಿ ಪ್ರಾಧಿಕಾರದ ಬಗ್ಗೆ ಜನ ಸಾಮಾನ್ಯರಲ್ಲಿ ಇರುವ ಹೋಗಲಾಡಿಸಲು ವಿಶೇಷ ಜನಪರ ಯೋಜನೆಗಳನ್ನು ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.
ಬಂಟ್ವಾಳ ಪುರಸಭಾ ಕಾರ್ಯಾಲಯದ ಸಭಾಂಗಣದಲ್ಲಿ ಸೋಮವಾರ ನಡೆದ ಬಂಟ್ವಾಳ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ (ಬುಡಾ)ದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೂತನ ಅಧ್ಯಕ್ಷರಾಗಿ ನೇಮಕಗೊಂಡ ಪಿಯುಸ್ ಎಲ್. ರೋಡ್ರಿಗಸ್ ಅವರ ನಾಯಕತ್ವದಲ್ಲಿ ಬುಡಾ ಕ್ರೀಯಾಶೀಲ ಹಾಗೂ ಕಾರ್ಯದಕ್ಷತೆಯೊಂದಿಗೆ ಕಾರ್ಯಾಚರಿಸಲಿದೆ ಎಂದ ಅವರು, ನೂತನ ಅಧ್ಯಕ್ಷ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿಯುಸ್ ಎಲ್. ರೋಡ್ರಿಗಸ್ ಅವರಿಗೆ ಅಭಿನಂದನೆ ಸಲ್ಲಿಸಿದ್ದರು.


ಅಧಿಕಾರ ಸ್ವೀಕರಿಸಿ ಬಳಿಕ ಮಾತನಾಡಿದ ಬುಡಾ ನೂತನ ಅಧ್ಯಕ್ಷ ಪಿಯುಸ್ ಎಲ್ ರೋಡ್ರಿಗಸ್ ಅವರು, ಬಂಟ್ವಾಳ ಪುರಸಭೆಯ ಸಮಗ್ರ ಅಭಿವೃದ್ಧಿ ವಿಚಾರದಲ್ಲಿ ಬಂಟ್ವಾಳ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಮಾದರಿ ನಗರ ಹೇಗಿರಬೇಕೆನ್ನುವ ಪರಿಕಲ್ಪನೆಯ ಬಗ್ಗೆ ಸಾರ್ವಜನಿಕರ ಸಲಹೆ-ಸೂಚನೆಗಳನ್ನು ಪಡೆದು ಜನಸ್ನೇಹಿ ಆಡಳಿತವನ್ನು ಕೊಡುವುದಾಗಿ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಅವರ ಮಾರ್ಗದರ್ಶನದಲ್ಲಿ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಬಗ್ಗೆ ಇರುವ ಸಾರ್ವಜನಿಕ ಸಮಸ್ಯೆ, ಗೊಂದಲಗಳನ್ನು ನಿವಾರಿಸಲು ಪ್ರಯತ್ನಿಸಲಾಗುವುದು. ಬಂಟ್ವಾಳ ತಾಲೂಕು ಕೇಂದ್ರದ ಮುಖ್ಯ ಬೇಡಿಕೆಯಾದ ರಾಷ್ಟ್ರೀಯ ಹೆದ್ದಾರಿಯ ಸುಗಮ ಸಂಚಾರ ವ್ಯವಸ್ಥೆ, ಸಮಗ್ರ ಚರಂಡಿ ಯೋಜನೆ, ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ವಿಧಾನಗಳ ಬಗ್ಗೆ ಚಿಂತಿಸಲಾಗುವುದು ಎಂದವರು ಪ್ರತಿಕ್ರಿಯಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮುಡಾ ಹಾಜಿ ಇಬ್ರಾಹಿಂ ಕೋಡಿಜಾಲ್, ಜಿಪಂ ಸದಸ್ಯರಾದ ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಡಿ.ಎಸ್. ಮಮತಾ ಗಟ್ಟಿ, ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ, ಉಪಾಧ್ಯಕ್ಷೆ ಯಾಸ್ಮೀನ್, ಸದಸ್ಯರಾದ ರಾಮಕೃಷ್ಣ ಆಳ್ವ, ಮಹಮ್ಮದ್ ಶೆರೀಫ್, ಮಹಮ್ಮದ್ ನಂದರಬೆಟ್ಟು, ಜಗದೀಶ್ ಕುಂದರ್, ವಾಸು ಪೂಜಾರಿ, ಸದಾಶಿವ ಬಂಗೇರ, ಗಂಗಾಧರ್, ದೇವದಾಸ್ ಶೆಟ್ಟಿ, ಬುಡಾ ಮಾಜಿ ಅಧ್ಯಕ್ಷ ಎ.ಗೋವಿಂದ ಪ್ರಭು, ಬ್ಲಾಕ್ ಅಧ್ಯಕ್ಷರಾದ ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ, ಚಂದ್ರಹಾಸ ಕರ್ಕೇರಾ , ತಾಪಂ ಪದ್ಮಶೇಖರ್ ಜೈನ್, ಮಾಜಿ ಪುರಸಭಾಧ್ಯಕ್ಷೆ ಜಾಸ್ಮಿನ್ ಡಿಸೋಜ, ಕಾರ್ಪೂರೇಟರ್ಗಳಾದ ಶಶಿಧರ್ ಹೆಗ್ಡೆ, ಭಾಸ್ಕರ್ ಮೊಯಿಲಿ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ್, ಬಿ.ಎಚ್.ಖಾದರ್, ಕೆ.ಪದ್ಮನಾಭ ರೈ, ಪ್ರಕಾಶ್ ಕಾರಂತ್, ರೋಹನ್ ಮೊಂತೇರೊ, ಪದ್ಮನಾಭ ನರಿಂಗಾನ ಮತ್ತಿತರು ಅಭಿನಂದನೆ ಸಲ್ಲಿಸಿದರು.
` “ಬುಡಾ ಅಧ್ಯಕ್ಷ ಸ್ಥಾನವನ್ನು ನಿರೀಕ್ಷಿಸಿರಲಿಲ್ಲ. ಉಸ್ತುವಾರಿ ಸಚಿವರು ಅತ್ಯಂತ ವಿಶ್ವಾಸ ಇರಿಸಿ, ನನ್ನನ್ನು ಈ ಹುದ್ದೆಗೆ ಆರಿಸಿದ್ದಾರೆ. ಜನಪರವಾದ ಕೆಲಸ-ಕಾರ್ಯಗಳನ್ನು ಮಾಡುತ್ತಾ ಬುಡಾ ಅಧ್ಯಕ್ಷರ ಹುದ್ದೆಗೆ ನ್ಯಾಯ ಕೊಡುವುದು ನನ್ನ ಆದ್ಯ ಕರ್ತವ್ಯವಾಗಿದ್ದು, ಬಿ.ಸಿ.ರೋಡಿನ ಟ್ರಾಫಿಕ್ ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿ ಸಚಿವರೊಂದಿಗೆ ಚರ್ಚಿಸಲಾಗುವುದು”.
-ಪಿಯುಸ್ ಎಲ್. ರೋಡ್ರಿಗಸ್, ನೂತನ ಬುಡಾ ಅಧ್ಯಕ್ಷರು


