ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಕಸವಿಲೇವಾರಿ ಸಮಸ್ಯೆ ಉದ್ಭವಿಸಲು ಜಿಲ್ಲಾಧಿಕಾರಿಯೇ ಹೊಣೆ ಎಂದು ಶುಕ್ರವಾರ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ತಾಕತ್ ರಾವ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಸದಸ್ಯರು ನೇರ ಆರೋಪಿಸುವ ಮೂಲಕ ಜಿಲ್ಲಾಧಿಕಾರಿಯವರನ್ನೇ ನೇರ ಟಾರ್ಗೇಟ್ ಮಾಡಿದರು.
ಒಂದು ಹಂತದಲ್ಲಿ ಸದಸ್ಯರು ಪಕ್ಷ ಬೇಧಮರೆತು ಕಂಚಿನಡ್ಕ ಪದವು ತ್ಯಾಜ್ಯ ಸಂಸಕ್ರಣಾ ಘಟಕದ ಕಾಮಗಾರಿ ಪುನರಾರಂಭಕ್ಕೆ ಜಿಲ್ಲಾಡಳಿತವೇ ನಿರ್ಲಕ್ಷ್ಯ ವಹಿಸುತ್ತಿದೆ, ಇದರ ಹಿಂದೆ ಗಣಿ ಮತ್ತು ಭೂಮಾಫಿಯಾ ಕೈಯಾಡಿಸುತ್ತಿದೆ ಎಂಬ ಗಂಭೀರ ಆರೋಪ ಹೊರಿಸಿದರು. ಜಿಲ್ಲಾಧಿಕಾರಿಯವರು ಬಿ.ಸಿ.ರೋಡು ತಾಲೂಕು ಕಛೇರಿಗೆ ಬಂದರೂ, ಪುರಸಭೆಗೆ ಕಾಲಿಡುತ್ತಿಲ್ಲ. ಬಂಟ್ವಾಳವನ್ನು ದಾಟಿಯೇ ಬೆಳ್ತಂಗಡಿ, ಪುತ್ತೂರು ತಾಲೂಕಿಗೆ ಸಂಚರಿಸುತ್ತಿದ್ದರೂ ಬಂಟ್ವಾಳ ಪುರಸಭೆಗೆ ಭೇಟಿ ನೀಡಿ ಇಲ್ಲಿನ ಸಮಸ್ಯೆಯನ್ನು ಆಲಿಸುವ ಕನಿಷ್ಠ ಸೌಜನ್ಯವನ್ನು ತೋರುತ್ತಿಲ್ಲ, ಕಂಚಿನಡ್ಕ ಪದವು ಎಲ್ಲಿ ಎಂಬ ಬೇಜವಬ್ದಾರಿಯುತ ಪ್ರಶ್ನೆಯನ್ನು ಕೇಳುತ್ತಿರುವ ಅವರೂ ಒಬ್ಬ ಜಿಲ್ಲಾಧಿಕಾರಿಯೇ ಎಂದು ಸದಸ್ಯರಾದ ವಾಸುಪೂಜಾರಿ, ಸದಾಶಿವ ಬಂಗೇರ, ಗೋವಿಂದಪ್ರಭು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಂಚಿನಡ್ಕ ಪದವು ಅನಗತ್ಯ ವಿವಾದ..
ಕಂಚಿನಡ್ಕ ಪದವಿನಲ್ಲಿ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಅನುಮತಿ ನೀಡಿದ ಬಳಿಕ ಕಾಮಗಾರಿ ಆರಂಭಗೊಂಡು ಕಂಪೌಂಡ್ ಗೋಡೆ ಸೇರಿದಂತೆ ಮೂರು ಹಂತದಲ್ಲಿ ಕಾಮಗಾರಿ ನಡೆದ ಬಳಿಕ ಭೂಮಾಫಿಯಾ ಹಾಗೂ ಗಣಿಮಾಫಿಯಾ ಕಂಚಿನಡ್ಕ ಪದವಿನಲ್ಲಿ ಅನಗತ್ಯ ವಿವಾದ ಸೃಷ್ಟಿಸಿದೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಕೆಲರಾಜಕಾರಣಿಗಳು ಕೂಡ ಬೆಂಬಲ ನೀಡುತ್ತಿದ್ದಾರೆ ಎಂಬ ಆರೋಪ ಸಭೆಯಲ್ಲಿ ಕೇಳಿಬಂತು. ಕಾಮಗಾರಿ ಆರಂಭಕ್ಕೆ ಕಂದಾಯ ಇಲಾಖೆ ನಡೆಸಿದ ಸಮೀಕ್ಷೆಯಂತೆ ಸದ್ರಿ ಪರಿಸರದಲ್ಲಿ ಕೇವಲ 39 ಮನೆ, ಒಂದು ಅಂಗನವಾಡಿ ಮತ್ತು ಒಂದು ಶಾಲೆ ಮಾತ್ರ ಇತ್ತು. ಆದರೆ ಈಗ ನೂರ ಎಪ್ಪತ್ತಕ್ಕೂ ಅಧಿಕ ಮನೆ ಇದೆ ಎಂದು ಸುಳ್ಳು ಹೇಳಿಕೆ ನೀಡಲಾಗುತ್ತಿದೆ, ಅಲ್ಲಿ ಅಧಿಕೃತವಾಗಿರುವ ಮನೆ, ಅಂಗನವಾಡಿ ಮತ್ತು ಶಾಲೆಗಳಿಗೆ ಪುರಸಭೆಯಿಂದಲೇ ವ್ಯವಸ್ಥೆ ಕಲ್ಪಿಸುವ ತೀರ್ಮಾನವನ್ನು ಈಗಾಗಲೇ ತೆಗೆದುಕೊಂಡಿದೆ. ಈ ನಡುವೆ ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ, ವಿಧಾನಸಭೆಯ ಸದನ ಸಮಿತಿಗೂ ದೂರು ಸಲ್ಲಿಸಿದ್ದರು. ಸದ್ಯಕ್ಕೆ ಈ ಎಲ್ಲಾ ಕಾನೂನು ತೊಡಕುಗಳು ನಿವಾರಣೆಯಾಗಿದ್ದು, ಕಾಮಗಾರಿ ಮುಂದುವರಿಸಲು ಏನು ತೊಂದರೆ ಎಂದು ಸದಸ್ಯರಾದ ಗೋವಿಂದ ಪ್ರಭು ಸದಾಶಿವ ಬಂಗೇರ, ದೇವದಾಸಶೆಟ್ಟಿ ಪ್ರಶ್ನಿಸಿದರು.
ಅಧಿಕಾರಿಗಳ ಹಾರಿಕೆ ಉತ್ತರ..
ಮೊದಲ ಹಂತದಲ್ಲಿ ಪುರಸಭಾ ಸದಸ್ಯರಿಗೆ ಕಂಚಿನಡ್ಕ ಪದವಿನಲ್ಲಿ ತ್ಯಾಜ್ಯ ಘಟಕ ಮಾಡಿಯೇ ಸಿದ್ದ ಎಂಬ ರ್ಥದಲ್ಲಿ ಭರವಸೆ ನೀಡಿದ್ದ ಯೋಜನಾನಿರ್ದೇಶಕ ತಾಕತ್ ರಾವ್ ಹಾಗೂ ಕಾರ್ಯಪಾಲಕ ಅಭಿಯಂತರರಾದ ಶ್ರೀಧರ್ ಅವರು, ಬಳಿಕ ಈ ಘಟಕ ಕಾಮಗಾರಿಗೆ ಕಾನೂನು ತೊಡಕುಗಳಿವೆ, ಪುರಸಭೆಗೆ ಸಮಸ್ಯೆ ಆಗುತ್ತದೆ ಎಂದು ಹೇಳಿಕೆ ಬದಲಿಸಿದಾಗ, ಆಕ್ರೋಶಗೊಂಡ ಸದಸ್ಯರು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡದಿರಿ, ಯಾವುದೇ ಕಾರಣಕ್ಕೂ ಕಂಚಿನಡ್ಕ ಪದವಿನ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ಥಳಾಂತರಿಸುವುದಾಗಲಿ, ಅನುದಾನವನ್ನು ವಾಪಾಸು ಕಳುಹಿಸುವುದಾಗಲಿ ಮಾಡಲು ಬಿಡುವುದಿಲ್ಲ, ಒಂದು ವೇಳೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನುದಾನ ವಾಪಾಸು ಹೋದಲ್ಲಿ 23 ಸದಸ್ಯರ ಸಹಿತ ನಾಮನಿರ್ದೇಶಿತ ಸದಸ್ಯರೂ ಸೇರಿ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರ ಕಛೇರಿ ಮುಂದೆ ಧರಣಿ ಕುಳಿತುಕೊಳ್ಳುವುದಾಗಿ ಸದಸ್ಯರು ಒಕ್ಕೊರಲಿನಿಂದ ಎಚ್ಚರಿಸಿದರು.
ಇದರಿಮದ ಗಲಿಬಿಲಿಗೊಂಡ ಅಧಿಕಾರಿಗಳು, ಮುಖ್ಯಾಧಿಕಾರಿಯವರು ಈ ಕಾಮಗಾರಿಗೆ ಅನುಷ್ಠಾನಧಿಕಾರಿಯಾಗಿದ್ದು ಅವರೇ ನಿಭಾಯಿಸುತ್ತಾರೆ ಎಂದು ಹಾರಿಕೆ ಉತ್ತರ ನೀಡಿ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೊರಡಲು ಮುಂದಾದರು. ಆಗ ಸದಸ್ಯರಾದ ಗೋವಿಂದ ಪ್ರಭು, ದೇವದಾಸ್ ಶೆಟ್ಟಿ, ಸದಾಶಿವ ಬಂಗೇರ ಅಧಿಕಾರಿಗಳನ್ನು ಹೊರ ಹೋಗದಂತೆ ತಡೆ ಹಿಡಿದು, ನಿಲುವು ಸ್ಪಷ್ಟಪಡಿಸುವಂತೆ ಪಟ್ಟು ಹಿಡಿದರು.
ಇಂಜಿನಿಯರ್ ಗೆ ತರಾಟೆ..
ಕಂಚಿನಡ್ಕ ಪದವು ಘಟಕದ ಕಾಮಗಾರಿ ಮುಂದುವರಿಕೆಗೆ ಯಾವುದೇ ಕಾನೂನು ಅಡ್ಡಿಯಿಲ್ಲ ಎಂದು ಯೋಜನಾ ನಿರ್ದೇಶಕರು ಮಾತು ಆರಂಭಿಸಿದಾಗ , ಸರ್ವಸದಸ್ಯರು ಇಂಜಿನಿಯರ್ ಪ್ರಭಾದೇವಿ ಯವರನ್ನು ತರಾಟೆಗೆ ತೆಗೆದುಕೊಂಡರು. 6 ತಿಂಗಳ ಹಿಂದೆಯೇ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿಸುವಂತೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡರೂ ಇನ್ನೂ ಆಡಳೀತಾತ್ಮಕ ಮಂಜೂರಾತಿ ನೀಡಿಲ್ಲ, ಇಲ್ಲಸಲ್ಲದ ಕಾರಣಗಳನ್ನು ನೀಡಿ ಸದಸ್ಯರನ್ನೇ ದಾರಿತಪ್ಪಿಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚರ್ಚೆ ತಾರಕ್ಕಕೇರುತ್ತಲೇ ಯೋಜನಾನಿರ್ದೇಶಕರನ್ನು ಬೊಟ್ಟು ಮಾಡಿದ ಸದಸ್ಯ ಗೋವಿಂದ ಪ್ರಭು ಹಾಗೂ ಸದಾಶಿವ ಬಂಗೇರ ಅವರು, ನೀವು ಸಮಸ್ಯೆ ಬಗೆಹರಿಕೆಗೆ ಬಂದಿದ್ದೀರಾ, ಇಲ್ಲಾ ಗಣಿ ಮತ್ತು ಭೂ ಮಾಫಿಯಾದ ದಲ್ಲಾಳಿಗಳಾಗಿ ಬಂದಿದ್ದೀರಾ..? ಎಂದು ಖಾರವಾಗಿ ಪ್ರಶ್ನಿಸಿದರು. ಇದರಿಂದ ಅಸಮಾಧನಗೊಂಡ ಅಭಿಯಂತರ ಶ್ರೀಧರ ಅವರು, ತಮ್ಮ ಮೇಲೆ ಇಂತಹ ಗಂಭೀರ ಆರೋಪ ಮಾಡುತ್ತಿರುವಾಗ ನೀವೇಕೆ ಸುಮ್ಮನಿದ್ದೀರಿ ಎಂದು ಪುರಸಭಾ ಇಂಜಿನಿಯರ್ ಗಳಾದ ಪ್ರಭಾದೇವಿ ಹಾಗೂ ಡೊಮೆನಿಕ್ ಡಿಮೆಲ್ಲೋ ರವರನ್ನು ತರಾಟೆಗೆ ತೆಗೆದುಕೊಂಡರು.
ವಿಶೇಷ ಸಭೆಯಲ್ಲೇ ನಿರ್ಣಯ..
ಸುದೀರ್ಘ ಐದು ತಾಸುಗಳ ಕಾಲ ಚರ್ಚೆ ನಡೆಯಿತಾದರೂ, ಸ್ಪಷ್ಟ ನಿರ್ಣಯ ದಾಖಲಿಸುವಲ್ಲಿ ಸಭೆ ವಿಫಲವಾಯಿತು. ಆರಂಭದಲ್ಲಿ ಸಬೆ ಕರೆದ ಯೋಜನಾ ನಿರ್ದೇಶಕರು ಘಟಕದ ಬಗ್ಗೆ ತಮ್ಮ ನಿಲುವು ಪ್ರಕಟಿಸಬೇಕು, ಕಾಮಗಾರಿ ಯ ಟೆಂಡರ್ ಪ್ರಕ್ರಿಯೆಗೆ ಮಂಜೂರಾತಿ ನೀಡಬೇಕು ಎಂದು ಪಟ್ಟು ಹಿಡಿದರು. ಆದರೆ ಘಟಕದ ಪರವಾಗಿ ತಮ್ಮ ಹೇಳಿಕೆ ನೀಡಲು ಹಿಂಜರಿದ ಅಧಿಕಾರಿಗಳನ್ನು ಸಂಶಯದೃಷ್ಟಿಯಿಂದ ನೋಡಿದ ಸದಸ್ಯರು, ದಶಂಬರ್ ತಿಂಗಳ ಸಭಾ ನಿರ್ಣಯದಂತೆ ಘಟಕದಲ್ಲಿ ಆಗಬೇಕಾದ 24 ಕಾಮಗಾರಿಗಳಿಗೆ ಮಂಜೂರಾತಿ ನೀಡುವಂತೆ ನಿರ್ದೇಶಕರ ಪಟ್ಟು ಹಿಡಿದರು. ಇದನ್ನು ನಿರಾಕರಿಸಿದ ಅಧಿಕಾರಿಗಳು, ವಿಶೇಷ ಸಭೆ ಕರೆದು ಅದರಲ್ಲಿ ನಿರ್ಣಯಿಸಿ ನಮಗೆ ಕಳಹಿಸಿ ಎಂದು ಸಲಹೆ ನೀಡಿದರು. ಈ ಹಂತದಲ್ಲಿ ವಿಶೇಷ ಸಭೆ ಬೆಡವೇ ಬೇಡ ಎಂದು ಪುರಸಭಾಧ್ಯಕ್ಷೆ ವಸಂತಿಚಂದಪ್ಪ ಸಹಿತ ಸರ್ವ ಸದಸ್ಯರು ಪಟ್ಟಿಹಿಡಿದರು. ಕೊನೆಯಲ್ಲಿ ಅಧಿಕಾರಿಗಳ ಒತ್ತಡಕ್ಕೆ ಮಣಿದ ಪುರಸಭಾ ಆಡಳಿತ ಮಾ.10 ರಂದು ವಿಶೇಷ ಸಭೆ ಕರೆದು ಕಾಮಗಾಋಇ ಟೆಂಡರ್ ಮಂಜೂರಾತಿಗೆ ನಿರ್ಣಯ ಕೈಗೊಳ್ಳುವ ನಿರ್ಧಾರದೊಂದಿಗೆ ಒಟ್ಟು ಚರ್ಚೆಗೆ ತೆರೆ ಬಿತ್ತು.
ಪುರಸಭಾ ಅದ್ಯಕ್ಷೆ ವಸಂತಿಚಂದಪ್ಪ, ಉಪಾಧ್ಯಕ್ಷೆ ಯಾಸ್ಮೀನ್, ಸಹಾಯಕ ಅಭಿಯಂತರ ತೇಜಮೂರ್ತಿ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಮತ್ತಿತರರು ವೇದಿಕೆಯಲ್ಲಿದ್ದರು. ಸದಸ್ಯರಾದ ರಾಮಕೃಷ್ಣ ಆಳ್ವ, ಮಹಮ್ಮದ್ ನಂದರಬೆಟ್ಟು, ಶರೀಫ್, ಮೊನಿಶ್ ಆಲಿ, ಪ್ರವೀಣ್, ಇಕ್ಬಾಲ್, ಗಂಗಾಧರ್, ಜಗದೀಶ್ ಕುಂದರ್, ಚಂಚಲಾಕ್ಷಿ, ಸುಗುಣಾ ಕಿಣಿ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.

By suddi9

Leave a Reply

Your email address will not be published. Required fields are marked *