ಬಂಟ್ವಾಳ: ಬಂಟ್ವಾಳ ತಾಲ್ಲೂಕು ಕಚೇರಿ ಆಡಳಿತ ವೈಖರಿ ಮತ್ತು ಜನಸಾಮಾನ್ಯರನ್ನು ಅಲೆದಾಡಿಸುವ ಮೂಲಕ ಪೀಡಿಸುತ್ತಿರುವ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಗುರುವಾರ ಬಂಟ್ವಾಳ ತಾಲೂಕು ಕಛೇರಿಗೆ ದಿಢೀರ್ ಭೇಟಿ ನೀಡಿ ಇಲ್ಲಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಕಳೆದ ಹಲವು ಸಮಯದಿಂದ ವಿಲೇವಾರಿಗೆ ಬಾಕಿಯಿರುವ ಎಲ್ಲಾ ಕಡತಗಳನ್ನು ಕೇವಲ ಮೂರು ದಿನಗಳ ಒಳಗೆ ತ್ವರಿತವಾಗಿ ವಿಲೇವಾರಿ ಮಾಡಲು ಅವರು ಉಪ ತಹಶೀಲ್ದಾರರಿಗೆ ತಾಕೀತು ಮಾಡಿದರು.

ಇದೇ ವೇಳೆ ಸಾರ್ವಜನಿಕರ ಅರ್ಜಿ ಮತ್ತಿತರ ಕಡತಗಳಿಗೆ ಸಂಬಂಧಿಸಿದಂತೆ ವಿಳಂಬ ಧೋರಣೆ ಅನುಸರಿಸಿದ್ದಲ್ಲಿ ಅಂತಹವರನ್ನು ಅಮಾನತುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಇಲ್ಲಿನ ಮಿನಿ ವಿಧಾನಸೌಧ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲು ಕಚೇರಿಯ ಎಲ್ಲಾ ಕಡತಗಳನ್ನು ತ್ವರಿತ ವಿಲೇವಾರಿ ಅನಿವಾರ್ಯವಾಗಿದ್ದು, ಕಚೇರಿ ವ್ಯಾಪ್ತಿಯಲ್ಲಿರುವ ಒಟ್ಟು ಕಡತಗಳ ಸಂಖ್ಯೆ ಸೇರಿದಂತೆ ಆಡಳಿತ, ಭೂಮಿ, ಚುನಾವಣೆ, ಆಹಾರ ಶಾಖೆಗೆ ಸಂಬಂಧಿಸಿದ ಎಲ್ಲಾ ಕಡತಗಳ ಬಗ್ಗೆ ಸಮಗ್ರ ವಿವರವನ್ನು ಗುರುಆಋ ಸಂಜೆಯೊಳಗೆ ಒದಗಿಸುವಂತೆ ಉಪ ತಹಸೀಲ್ದಾರರಿಗೆ ಸೂಚಿಸಿದರು.
ತಾಲ್ಲೂಕು ಕಚೇರಿಗೆ ಸಂಬಂಧಿಸಿದಂತೆ ಕಡತ ನಾಪತ್ತೆ ಪ್ರಕರಣ ಸೇರಿದಂತೆ ಕೆಲವೊಂದು ಸಾಮಾಗ್ರಿಗಳ ದುರುಪಯೋಗ ತಡೆಯಲು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ವಿಶೇಷ ಸಮಿತಿ ರಚಿಸಲಾಗಿದೆ. ಇಲ್ಲಿನ ಮಧ್ಯವರ್ತಿ ಗಳ ಹಾವಳಿ, ಲಂಚ ಸ್ವೀಕಾರ ಮತ್ತಿತರ ಪ್ರಕರಣ ನಿಯಂತ್ರಿಸಲು ಈ ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ತ್ಯಾಜ್ಯ ವಿಲೇವಾರಿ ಸಭೆ:
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಉಂಟಾಗಿರುವ ಅಸಮರ್ಪಕ ಕಸ ವಿಲೇವಾರಿಗೆ ಜಿಲ್ಲಾಧಿಕಾರಿಯನ್ನೇ ಹೊಣೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಶುಕ್ರವಾರ ಬೆಳಿಗ್ಗೆ ಪುರಸಭೆಯಲ್ಲಿ ತುರ್ತು ಸಭೆ ಕರೆಯಲಾಗಿದೆ ಎಂದರು.
ಮರಳು ದಂಧೆಗೆ ಕಡಿವಾಣ:
ಪಾಣೆಮಂಗಳೂರು ಹಳೆ ಸೇತುವೆ ಬಳಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಈಗಾಗಲೇ ತಾಲ್ಲೂಕಿನ ನಂದಾವರ ಮತ್ತಿತರ ಕಡೆಗಳಲ್ಲಿ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲಾಗಿದೆ ಎಂದು ಅವರು ತಿಳಿಸಿದರು.
ಉಪವಿಭಾಗಾಧಿಕಾರಿ ಡಾ.ಅಶೋಕ್, ಪ್ರಭಾರ ತಹಸೀಲ್ದಾರ್ ಮಹಮ್ಮದ್ ಇಸಾಕ್, ಉಪತಹಸೀಲ್ದಾರ್ರಾದ ಪರಮೇಶ್ವರ ನಾಯಕ್, ಭಾಸ್ಕರ್ ರಾವ್, ಜೆ.ಡಿ.ರೊಡ್ರಿಗಸ್, ಪರಮೇಶ್ವರ ಮೊಯಿಲಿ, ಕಂದಾಯ ನಿರೀಕ್ಷಕರಾದ ದಿವಾಕರ್ ಪಡ್ಜಾಲ್, ವಾಮನ್, ರೋಹಿನಾಥ್, ಸಾಧು ಮತ್ತಿತರರು ಇದ್ದರು.
ತಹಶೀಲ್ದಾರ ನೇಮಕ:
ಬಂಟ್ವಾಳದಲ್ಲಿ ಬಿ.ಎಸ್.ಮಲ್ಲೇಸ್ವಾಮಿ ನಿವೃತ್ತಿ ಬಳಿಕ ತೆರವಾಗಿರುವ ತಹಶೀಲ್ದಾರ್ ಸ್ಥಾನಕ್ಕೆ ಕಡಬದಿಂದ ಪಾಂಡುರಂಗ ಹೆಗ್ಡೆ ಅವರನ್ನು ಸರ್ಕಾರ ನೇಮಕಗೊಳಿಸಿದ್ದು, ಶೀಘ್ರವೇ ಅಧಿಕಾರ ಸ್ವೀಕರಿಸುವರು ಎಂದು ಅವರು ಪ್ರತಿಕ್ರಿಯಿಸಿದರು.
