ಬಂಟ್ವಾಳ:ಕರ್ನಾಟಕ ಲೋಕ ಸೇವಾ ಆಯೋಗದ ಹುದ್ದೆಗಳಿಗೆ ಮಂಗಳೂರನಲ್ಲಿಯೂ ಪರೀಕ್ಷಾ ಕೇಂದ್ರವನ್ನು ತೆರೆಯುವಂತೆ ಸಂಗಬೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಭಾಕರ ಪ್ರಭುರವರು ಕರ್ನಾಟಕ ಸರಕಾರವನ್ನು ಒತ್ತಾಯಿಸಿದ್ದಾರೆ. ಬುಧವಾರ ಸಂಜೆ ಬಿ.ಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತಾನಾಡಿದ ಅವರು ರಾಜ್ಯ ಸರ್ಕಾರವು ತನ್ನ ಆಡಳಿತವನ್ನು ವಿಕೇಂದ್ರೀಕರಿಸಿ ತನ್ನೆಲ್ಲ ಸೇವೆಗಳನ್ನು ಜನರ ಮನೆ ಬಾಗಿಲಿಗೆ ಒದಗಿಸುತ್ತಿದೆ ಆದರೆ ಆಡಳಿತ ಸೇವೆಗೆ ಆಯ್ಕೆ ನಡೆಸಲು ಮಾಡುವ ಪರೀಕ್ಷೆ ಬರೆಯುವ ಭಾಗ್ಯ ಕರಾವಳಿ ಕರ್ನಾಟಕದ ಬಡಜನತೆಗೆ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
55
ಈಗಿರುವ ವ್ಯವಸ್ಥೆಯಂತೆ ಬೆಂಗಳೂರಲ್ಲಿ ಕೇಂದ್ರ ಸ್ಥಾನವನ್ನು ಹೊಂದಿರುವ ತನ್ನ ಪ್ರಾದೇಶಿಕ ಕೇಂದ್ರಗಳನ್ನು ಮೈಸೂರು, ಗುಲ್ಬರ್ಗ , ಧಾರವಾಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸ್ಥಾಪಿಸಿದೆ. ಇತ್ತೀಚೆಗೆ ಹೊರಡಿಸಿದ ಅಧಿಸೂಚನೆಯಂತೆ ತನ್ನ ಪ್ರಾದೇಶಿಕ ಕೇಂದ್ರಗಳಲ್ಲದೆ ಬಳ್ಳಾರಿ ಮತ್ತು ಬೆಳಗಾವಿಯಲ್ಲಿ ಪರೀಕ್ಷಾ ಕೇಂದ್ರಗಳನ್ನು ರಚಿಸಿದೆ. ಆದರೆ ಬೆಂಗಳೂರು ಅಥವಾ ಇತರ ಪರೀಕ್ಷಾ ಕೇಂದ್ರಗಳಿಂದ ಬಹಳ ಅಂತರದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯು ಭೌಗೋಳಿಕವಾಗಿ ರಾಜ್ಯದಲ್ಲಿಯೇ ಭಿನ್ನವಾಗಿದೆ ,ಶಿಕ್ಷಣ ಕ್ಷೇತ್ರದಲ್ಲಿ ದೇಶದಲ್ಲಿಯೇ ಪ್ರಸಿದ್ಧಿ ಪಡೆದಿದ್ದು ಸಂಪೂರ್ಣ ಸಾಕ್ಷರತೆಯಲ್ಲಿ ಹೆಗ್ಗಳಿಕೆ ಪಡೆದು ಬುದ್ದಿವಂತರ ಜಿಲ್ಲೆ ಎಂಬ ಹಿರಿಮೆಯನ್ನು ಹೊಂದಿದ್ದರೂ. ಕರ್ನಾಟಕ ಲೋಕ ಸೇವಾ ಆಯೋಗವು ನಡೆಸುತ್ತಿರುವ ಯಾವುದೇ ಉನ್ನತ ಹುದ್ದೆಗಳಿಗೆ ಮಂಗಳೂರನ್ನು ಪರೀಕ್ಷಾ ಕೇಂದ್ರವನ್ನಾಗಿ ಪರಿಗಣಿಸದಿರುವುದರಿಂದ ದ.ಕ ಮತ್ತು ಉಡುಪಿ ಜಿಲ್ಲೆಯ ಉನ್ನತ ಹುದ್ದೆಯ ಉದ್ಯೋಗಾಕಾಂಕ್ಷಿಗಳು ವಂಚಿತರಾಗಿದ್ದಾರೆ ಎಂದರು.
ಅಪರಿಚಿತ ಸ್ಥಳ ಹಾಗೂ ಪರೀಕ್ಷಾ ಕೇಂದ್ರಗಳು ದೂರದಲ್ಲಿರುವುದರಿಂದ ಈ ಭಾಗದ ಜನತೆಗೆ ಆಡಳಿತ ಸೇವೆ ಹಾಗೂ ಇತರ ಉನ್ನತ ಹುದ್ದೆಗಳ ಪರೀಕ್ಷೆಗಳನ್ನು ಬರೆಯುವ ಭಾಗ್ಯ ಮರೀಚಿಕೆಯಾಗಿದೆ ಎಂದ ಅವರು ಅವಿಭಜಿತ ಕರಾವಳಿ ಜಿಲ್ಲೆಗಳ ಸಚಿವರುಗಳು, ಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ತಮ್ಮ ಪ್ರಾಮಾಣಿಕ ಪ್ರಯತ್ನದ ಮೂಲಕ ಮಂಗಳೂರನ್ನು ಕರ್ನಾಟಕ ಲೋಕ ಸೇವಾ ಆಯೋಗದ ಪ್ರಾದೇಶಿಕ ಕೇಂದ್ರ ಅಥವಾ ಪರೀಕ್ಷಾ ಕೇಂದ್ರವನ್ನು ತೆರೆಯುವ ನಿಟ್ಟಿನಲ್ಲಿ ಶ್ರಮಿಸುವಂತೆ ಆಗ್ರಹಿಸಿದರು. ಈ ಸಂಬಂಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಯೋಗದ ಕಾರ್ಯದರ್ಶಿ , ಉಭಯ ಜಿಲ್ಲೆಯ ಸಚಿವರಿಗೆ ಮನವಿಯನ್ನು ಸಲ್ಲಿಸಲಾಗಿದೆ. ಮುಂದಿನ ದಿನದಲ್ಲಿ ಖುದ್ದು ಮುಖ್ಯಮಂತ್ರಿಯನ್ನು ಭೇಟಿಯಾಗಿ ಈ ಬಗ್ಗೆ ಮನವರಿಕೆ ಮಾಡಲಾಗುವುದು ಎಂದರು.
ಸಿದ್ದಕಟ್ಟೆ ಸಿ.ಎ. ಬ್ಯಾಂಕ್ ನಿರ್ದೇಶಕ ಸೀತಾರಾಮ ಶೆಟ್ಟಿ , ಭಗವತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಶಾಂತ್ ಹೆಣ್ಣೂರುಪದವು , ಸಂಗಬೆಟ್ಟು ಪಂಚಾಯತ್ ಸದಸ್ಯ ಎಚ್.ಉಮ್ಮರ್ ಫಾರೂಕ್ , ಕಾಂಗ್ರೇಸ್ ಮುಖಂಡ ಜನಾರ್ಧನ ಚಂಡ್ತಿಮಾರ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *