ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಬಳಿ ರೂ 10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀರಾಮ ಮಂದಿರ ನಕಾಶೆ.
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಬಳಿ ರೂ 10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶಿಲಾಮಯ ಶ್ರೀರಾಮ ಮಂದಿರ ನಿರ್ಮಾಣ ಕಾಮಗಾರಿಗೆ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅವರು ಇದೇ 4ರಂದು ಮಧ್ಯಾಹ್ನ 12.13ಗಂಟೆಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಈಗಾಗಲೇ ಬಾಳ್ತಿಲ, ಗೋಳ್ತಮಜಲು, ವೀರಕಂಬ, ಬೋಳಂತೂರು, ಅಮ್ಟೂರು, ಪಾಣೆಮಂಗಳೂರು ಗ್ರಾಮ ವ್ಯಾಪ್ತಿಯ ಒಟ್ಟು 2,500 ಮನೆಗಳಿಗೆ ಶ್ರೀರಾಮ ಜ್ಯೋತಿ ಯಾತ್ರೆ ನಡೆದಿದೆ. ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರತಿ ಮನೆಯಿಂದ ಶಿಲೆಗೆ ಹಾಲಿನ ಅಭಿಷೇಕ ಮತ್ತು ನಿಧಿಕುಂಭಕ್ಕೆ ಬೆಳ್ಳಿ ನಾಣ್ಯ ಸಮರ್ಪಣೆಗೆ ಅವಕಾಶ ನೀಡಲಾಗಿದೆ.
ಬೆಳಿಗ್ಗೆ ಗಂಟೆ 8.30ಕ್ಕೆ ಅಮ್ಟೂರು ಶ್ರೀಕೃಷ್ಣ ಮಂದಿರ, ಗೇರುಕಟ್ಟೆ ಉಮಾಶಿವ ಕ್ಷೇತ್ರ, ಗೋಳ್ತಮಜಲು ಗಣೇಶ ಮಂದಿರ, ಕುದ್ರೆಬೆಟ್ಟು ಮಣಿಕಂಠ ಭಜನಾ ಮಂದಿರ, ತುಳಸೀವನ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಮತ್ತು ಹನುಮಾನ್‍ನಗರ ಶ್ರೀರಾಮ ವಿದ್ಯಾಕೇಂದ್ರದಿಂದ ಶಿಲೆ ಮತ್ತು ಶ್ರೀರಾಮ ಜ್ಯೋತಿ ಶೋಭಾಯಾತ್ರೆ ನಡೆಯಲಿದೆ.
ಮಧ್ಯಾಹ್ನ ನಡೆಯುವ ಧಾರ್ಮಿಕ ಸಭೆಯಲ್ಲಿ ವೇದ ವಿದ್ವಾನ್ ಕೆ.ಎಸ್. ನಿತ್ಯಾನಂದ ಸ್ವಾಮೀಜಿ ಚಿಕ್ಕಮಂಗಳೂರು, ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ವಾಸ್ತುತಜ್ಞ ಪ್ರಸಾದ ಮುನಿಯಂಗಳ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಜೀಣೋದ್ಧಾರ ಸಮಿತಿ ಗೌರವಾಧ್ಯಕ್ಷ ಡಾ.ಕೆ.ಪ್ರಭಾಕರ ಭಟ್ ಮತ್ತು ಕಾರ್ಯಾಧ್ಯಕ್ಷ ಜಿತೇಂದ್ರ ಎಸ್.ಕೊಟ್ಟಾರಿ ತಿಳಿಸಿದ್ದಾರೆ.
