ಮಂಗಳೂರು: ಜ್ಯೋತಿ ಚಿತ್ರ ಮಂದಿರದ ಬಳಿಯ ಅಂಬೇಡ್ಕರ್‌ ವೃತ್ತದಿಂದ ಬಂಟ್ಸ್‌ ಹಾಸ್ಟೆಲ್‌ ವೃತ್ತದವರೆಗಿನ ನವೀಕರಣಗೊಳಿಸಿದ ಕಾಂಕ್ರೀಟ್‌ ರಸ್ತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸೋಮವಾರ ಸಂಜೆ ಉದ್ಘಾಟನೆಗೊಳಿಸಿದ್ದು ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆ.
0001

424 ಮೀಟರ್‌ ಉದ್ದದ ಚತುಷ್ಪಥ ರಸ್ತೆಯಲ್ಲಿ 1 ಮೀಟರ್‌ ಅಗಲದ ವಿಭಜಕವನ್ನು ಅಳವಡಿಸಲಾಗಿದ್ದು ಒಟ್ಟು ರೂ1.96 ಕೋಟಿ ವೆಚ್ಚದಲ್ಲಿ ಈ ರಸ್ತೆ ನಿರ್ಮಾಣವಾಗಿದೆ. ‘ಮುಖ್ಯಮಂತ್ರಿಗಳ ರೂ100 ಕೋಟಿ ಯೋಜನೆಗಳ ಎರಡನೇ ಹಂತದ ಅನುದಾನದಲ್ಲಿ ಕೈಗೆತ್ತಿಕೊಂಡ ಈ ಕಾಮಗಾರಿ ಮುಕ್ತಾಯಗೊಳಿಸಲು ಗುತ್ತಿಗೆದಾರರು ಆರು ತಿಂಗಳ ಅವಧಿ ಕೋರಿದ್ದರು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಓಡಾಡುವ ರಸ್ತೆ ಇದಾಗಿರುವುದರಿಂದ ಅವಧಿಗೆ ಮುನ್ನವೇ ಕಾಮಗಾರಿ ಮುಗಿಸುವಂತೆ ಮಹಾನಗರ ಪಾಲಿಕೆ ಒತ್ತಡ ಹಾಕಿದೆ. ಕಳೆದ ನವೆಂಬರ್‌ನಲ್ಲಿ ರಸ್ತೆಯನ್ನು ದುರಸ್ತಿಗಾಗಿ ಮುಚ್ಚಲಾಗಿದ್ದು ಫೆಬ್ರುವರಿ 20ರಂದು ಕಾಮಗಾರಿ ಮುಕ್ತಾಯಗೊಳಿಸಲಾಗಿದೆ.
ರಸ್ತೆಯನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವರು ನಗರದ ಪ್ರಮುಖ ರಸ್ತೆಯ ನವೀಕರಣ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ಶಾಸಕ ಜೆ. ಆರ್‌. ಲೋಬೊ ಮಾತನಾಡಿ, ಅಂಬೇಡ್ಕರ್‌ ವೃತ್ತದಿಂದ ಬಂಟ್ಸ್‌ ಹಾಸ್ಟೆಲ್‌ ವರೆಗಿನ ರಸ್ತೆ ಕಾಮಗಾರಿ ಮುಕ್ತಾಯವಾಗಿದ್ದು ಮುಂದಿನ ದಿನಗಳಲ್ಲಿ ಚರಂಡಿ ಮತ್ತು ಪಾದಚಾರಿ ಮಾರ್ಗ ನಿರ್ಮಾಣ, ವಿದ್ಯುತ್‌ ದೀಪದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಸಂಚಾರ ಸುಗಮವಾಗಲಿ ಎಂಬ ದೃಷ್ಟಿಯಿಂದ ರಸ್ತೆಯನ್ನು ಸಾರ್ವಜನಿಕರಿಗೆ ತುರ್ತಾಗಿ ಉದ್ಘಾಟಿಸಲಾಗಿದೆ ಎಂದು ಹೇಳಿದರು.

ಪಾದಚಾರಿ ಮಾರ್ಗ ಮತ್ತು ಚರಂಡಿ ವ್ಯವಸ್ಥೆಗಾಗಿ ರೂ1.86 ಕೋಟಿ ಹಣದ ಯೋಜನೆ ರೂಪಿಸಲಾಗಿದ್ದು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸದ್ಯವೇ ಅನುದಾನ ಮಂಜೂರಾಗುವ ನಿರೀಕ್ಷೆ ಇದೆ ಎಂದು ಪಾಲಿಕೆ ಸದಸ್ಯ ಎ. ಸಿ. ವಿನಯ್‌ರಾಜ್‌ ತಿಳಿಸಿದರು.

ಉದ್ಘಾಟನೆ ಸಂದರ್ಭದಲ್ಲಿ ಉಪಮೇಯರ್‌ ಕವಿತಾ ವಾಸು, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸದಸ್ಯೆ ಸಬಿತಾ ಮಿಸ್ಕಿತ್‌, ಆಯುಕ್ತರಾದ ಹೆಪ್ಸಿಬಾ ರಾಣಿ ಕೊರ್ಲಾಪಟಿ, ಎಸಿಪಿ ಉದಯ್‌ನಾಯಕ್‌ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *