ಮಂಗಳೂರು: ಉತ್ಸಾಹಿ ಯುವಕ ಸಾಗರ್ ಸುಮಾರು 20 ನಿಮಿಷಗಳವರೆಗೆ ಮಂಜುಗಡ್ಡೆ ತುಂಬಿದ ಗಾಜಿನ ಪೆಟ್ಟಿಗೆಯೊಳಗೆ ಬೋರಲು ಮಲಗಿದ್ದು, ಬಂಧಿಸಿದ ಸರಪಳಿ ಕಳಚಿ ಹೊರ ಬಂದು ಹೊಸ ಸಾಹಸ ಪ್ರದರ್ಶನವನ್ನು ಮಾಡಿದ್ದಾರೆ.

ಮಂಗಳಾ ಮ್ಯಾಜಿಕ್ ಸರ್ಕಲ್ ವತಿಯಿಂದ ವಿಶ್ವ ಜಾದೂಗಾರರ ದಿನಾಚರಣೆ ಅಂಗವಾಗಿ ಸೋಮವಾರ ಸಂಜೆ ಏರ್ಪಡಿಸಿದ್ದ ವಿವಿಧ ಜಾದೂ ಕಾರ್ಯಕ್ರಮಗಳ ಪೈಕಿ, ಸಾಗರ್ ಅವರು ಮಾಡಿದ ‘ಬರೀಡ್ ಅಲೈವ್’ ಸಾಹಸ ಅತ್ಯಂತ ಕುತೂಹಲಕಾರಿ ಹಾಗೂ ಅಪಾಯಕಾರಿ.

ವೈದ್ಯರು ಹೇಳುವ ಪ್ರಕಾರ ಒಂದು ನಿಮಿಷಕ್ಕಿಂತ ಹೆಚ್ಚು ಹೊತ್ತು ಮಂಜುಗಡ್ಡೆಯ ಒಳಗೆ ಮಲಗಿದರೆ ವ್ಯಕ್ತಿಯ ಹೃದಯದ ಬಡಿತ ಕಡಿಮೆಯಾಗುತ್ತದೆ. ರಕ್ತ ಹೆಪ್ಟುಗಟ್ಟಲಾರಂಭಿಸುತ್ತದೆ. ಮಿದುಳು ನಿಷ್ಕ್ರಿಯಗೊಳ್ಳಲಾರಂಭಿಸುತ್ತದೆ. ಅಂಥದ್ದರಲ್ಲಿ 20 ನಿಮಿಷಗಳವರೆಗೆ ಮಂಜುಗಡ್ಡೆ ರಾಶಿಯೊಳಗೆ ಅಪಾಯಕಾರಿ ಸಾಹಸವನ್ನು  ಮಾಡಿ ಯಶಸ್ವಿಯಾಗಿದ್ದಾರೆ.
23jaadu

ಆರು ಅಡಿ ಉದ್ದದ ಗಾಜಿನ ಪೆಟ್ಟಿಗೆಯೊಳಗೆ ಅರ್ಧ ಭಾಗದಷ್ಟು ಐಸ್ ತುಂಬಿದ ಬಳಿಕ 30 ಅಡಿ ಉದ್ದದ ಸರಪಳಿಯಯಿಂದ ಸಾಗರ್ ಅವರನ್ನು ಬಂಧಿಸಿ 12 ಬೀಗಗಳನ್ನು ಹಾಕಿ ರಾತ್ರಿ 7.10ರ ವೇಳೆಗೆ ಮಲಗಿಸಲಾಯಿತು. ತಲೆಭಾಗದಲ್ಲಿ ಉಸಿರಾಟಕ್ಕೆ ಸ್ವಲ್ಪ ಜಾಗ ಬಿಟ್ಟು ಕಾಲಿಂದ ಕತ್ತಿನವರೆಗೆ ಐಸ್ ತುಂಬಿಸಿದ ಮೇಲೆ 7.15ರಿಂದ ಟೈಮ್ ಕೌಂಟ್ ಮಾಡಲಾಯಿತು. ಸುಮಾರು 7.30ರ ವೇಳೆಗೆ ಸಾಗರ್, ಬಂಧನ ಕಳಚಿ ಹೊರಬಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಜಯವಿಠಲನಾಥ ಶೆಟ್ಟಿ ಅವರು ಸಾಗರ್ ಅವರಿಗೆ ಕೈಗಳಿಗೆ ಕೋಳ ತೊಡಿಸಿದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ಚಿತ್ರನಟ ಅವಿನಾಶ್ ಶೆಟ್ಟಿ, ಕಾರ್ಪೊರೇಟರ್ ರೂಪ ಡಿ.ಬಂಗೇರ ಉಪಸ್ಥಿತರಿದ್ದರು.

ಮಂಗಳಾ ಆಸ್ಪತ್ರೆಯ ಆ್ಯಂಬುಲೆನ್ಸ್  ಮತ್ತು  ವೈದ್ಯರ ತಂಡ ಚಿಕಿತ್ಸೆಗೆ ಸಜ್ಜಾಗಿ ನಿಂತಿತ್ತು. ಮಂಜುಪೆಟ್ಟಿಗೆಯಿಂದ ಹೊರ ಬಂದ ಬಳಿಕ ಥರಥರ ನಡುಗುತ್ತಿದ್ದ ಸಾಗರ್ ಅವರಿಗೆ ಶಾಖದ ವ್ಯವಸ್ಥೆ ಮಾಡಿದರು.  ಸ್ವಲ್ಪ ಹೊತ್ತಿನ ಬಳಿಕ ಅವರ ದೇಹಸ್ಥಿತಿ ಸಮಸ್ಥಿತಿಗೆ ಬಂದಿರುವುದಾಗಿ ಘೋಷಿಸಿದರು.

By suddi9

Leave a Reply

Your email address will not be published. Required fields are marked *