ಮೂಡುಬಿದಿರೆ:ದ.ಕ. ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಸೋಮವರ ಇಲ್ಲಿನ ತಹಶಿಲ್ದಾರ್ ಕಛೇರಿ ಮತ್ತು ಉಪನೋಂದಣಿ ಕಛೇರಿಗೆ ದಿಢೀರ್ ಭೇಟಿ ಕಡತಗಳ ಪರಿಶೀಲನೆ ನಡೆಸಿದರು.

ಪೂವರ್ಾಹ್ನ ತಹಶಿಲ್ದಾರ್ ಕಛೇರಿಗೆ ಭೇಟಿ ನೀಡಿದ ಅವರು ಕೆಲ ಕಡತಗಳನ್ನು ಪರಿಶೀಲಿಸಿ ಅವು ಕ್ಲಪ್ತ ಸಮಯದಲ್ಲಿ ವಿಲೇ ಆಗದಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದರು. ಜನರ ಕೆಲಸಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ಅವರು ಸಿಬಂದಿಗಳಿಗೆ ಸೂಚನೆ ನೀಡಿದರು. ತಹಶಿಲ್ದಾರ್ ಕಛೇರಿ ಸುತ್ತಮುತ್ತಲ್ಲಿದ್ದ ಕಸ ಕಡ್ಡಿಗಳನ್ನು ಪುರಸಭೆ ವಿಲೇ ಮಾಡದಕ್ಕೆ ತಹಶಿಲ್ದಾರ್ ಅವರನ್ನು ಕೇಳಿದ ಜಿಲ್ಲಾಧಿಕಾರಿ ಈ ಬಗ್ಗೆ ಪುರಸಭೆಯ ಗಮನಕ್ಕೆ ತರುವಂತೆ ತಹಶಿಲ್ದಾರ್ಗೆ ಅವರು ತಿಳಿಸಿದರು.
ಬಳಿಕ ಉಪನೋಂದಣಿ ಕಛೇರಿಗೆ ತೆರಳಿದ ಜಿಲ್ಲಾಧಿಕಾರಿ ಅಲ್ಲಿನ ಅವ್ಯವಸ್ಥೆ ಕಂಡು ಅಚ್ಚರಿಗೊಂಡರು. ಕಛೇರಿಯೊಳಗೆ ಸ್ಥಳವಕಾಶದ ಕೊರತೆ, ಹೊರಗಡೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದಿರುವುದು, ಶೌಚಾಲಯ ಅವ್ಯವಸ್ಥೆ, ಇನ್ನಿತರ ಮೂಲ ಸೌಕರ್ಯಗಳ ಕೊರತೆ ಬಗ್ಗೆ ಜಿಲ್ಲಾಧಿಕಾರಿ ಗಮನಹರಿಸಿದರು. ಕಛೇರಿ ಸಿಬಂದಿಗಳ ಬಗ್ಗೆ ವಿವರ ಪಡಕೊಂಡ ಜಿಲ್ಲಾಧಿಕಾರಿ ಕಛೇರಿಯಲ್ಲಿರುವ ಸರಕಾರಿ ನೌಕರರು ಮತ್ತು ದಿನಕೂಲಿ ಆಧಾರಿತ ಸಿಬಂದಿಗಳೆಷ್ಟು ಎಂಬುದರ ಬಗ್ಗೆ ನೋಂದಣಿ ಅಧಿಕಾರಿಯಿಂದ ಮಾಹಿತಿ ಪಡಕೊಂಡರು.
