ಕಿನ್ನಿಗೋಳಿ: 1998ರಲ್ಲಿ ಸುರತ್ಕಲ್ ಕೋಮುಗಲಭೆಗೆ ತುತ್ತಾಗಿತ್ತು. ಬರೋಬ್ಬರಿ ತಿಂಗಳ ಕಾಲ ಸುರತ್ಕಲ್ ಎನ್ನುವ ಪುಟ್ಟ ಪೇಟೆ ಹೊತ್ತಿ ಉರಿದು ಜನಜೀವನ ಅಸ್ತವ್ಯಸ್ತವಾಗಿತ್ತು. ಅಲ್ಲಲ್ಲಿ ಅಮಾಯಕರ ಹೆಣ ಮಕಾಡೆ ಮಲಗಿದ್ದನ್ನು ನೆನಪಿಸಿಕೊಂಡರೆ ಈಗಲೂ ಸುರತ್ಕಲ್ ಜನರು ಬೆಚ್ಚಿಬೀಳುತ್ತಾರೆ. ಆದರೆ ಅಂದಿನ ಗಲಭೆಗೆ ಕಾರಣವಾದರೂ ಏನು ಗೊತ್ತೇ? ಅದರ ಹಿಂದಿನ ಮೂಲ ಯಾವುದು ಗೊತ್ತೇ? ಇದೇ ಗೋವಿಂದ ದಾಸ ಕಾಲೇಜು.
ಕಾಲೇಜಿನ ಚುಡಾವಣೆಯೇ ಗಲಭೆಗೆ ಮೂಲ:
ಸುರತ್ಕಲ್ ಕೋಮು ದಳ್ಳುರಿಗೆ ತುತ್ತಾಗಲು ಕಾರಣವಾಗಿದ್ದೇ ಇಲ್ಲಿ ವಾರ್ಷಿಕೋತ್ಸವ ಸಂದರ್ಭ ನಡೆದ ಯುವತಿಯರ ಚುಡಾವಣೆ. ಇದೇ ಕಾರಣ ಮುಂದಿಟ್ಟುಕೊಂಡು ಒಂದು ಸಮುದಾಯದ ಯುವಕರು ಇನ್ನೊಂದು ಸಮುದಾಯದ ಯುವಕರ ಮೇಲೆ ಹಲ್ಲೆಗೆ ಮುಂದಾದರು. ಕಾಲೇಜು ಕ್ಯಾಂಪಸ್ಸಿನಿಂದ ಆರಂಭವಾದ ಧರ್ಮ-ಧರ್ಮಗಳ ಕದನ ಹೊರಗಡೆ ವ್ಯಾಪಿಸಲು ಹೆಚ್ಚು ಸಮಯ ಬೇಕಿರಲಿಲ್ಲ. ಕೆಲವೇ ಗಂಟೆಗಳಲ್ಲಿ ಸುರತ್ಕಲ್ ಪರಿಸರದ ಅಲ್ಲಲ್ಲಿ ಹಲ್ಲೆ, ಘರ್ಷಣೆ, ಕೊಲೆ, ಲೂಟಿ, ದರೋಡೆ ನಿರಾತಂಕವಾಗಿ ನಡೆಯಿತು. ಸುರತ್ಕಲ್ ಪರಿಸರದಲ್ಲಿ ಮತ್ತೆ ಶಾಂತಿ ಸ್ಥಾಪಿಸಲು ಆಗಿನ ಜನನಾಯಕರು, ಪೊಲೀಸ್ ಅಧಿಕಾರಿಗಳು ಪಟ್ಟ ಶ್ರಮ ಅಷ್ಟಿಷ್ಟಲ್ಲ.

ಪ್ರತೀವರ್ಷ ಕಾಲೇಜ್ ಅಂಗಳದಿಂದಲೇ ಕೋಮುಗಲಭೆ:
ಸುರತ್ಕಲ್ ಗೋವಿಂದದಾಸ ಕಾಲೇಜಿಗೂ-ಕೋಮುಗಲಭೆಗೂ ಎಲ್ಲಿಲ್ಲದ ನಂಟು. ಕಾಲೇಜ್ ವಿದ್ಯಾರ್ಥಿಗಳ ಮೇಲೆ ಹಲ್ಲೆಯಿಂದ ಆರಂಭಗೊಳ್ಳುವ ಪ್ರಕರಣ ನಂತರ ಅಲ್ಲಲ್ಲಿ ಹಲ್ಲೆ, ಚೂರಿ ಇರಿತದ ತನಕ ಮುಂದುವರಿಯುವುದು ಮಾಮೂಲಿ ಸಂಗತಿ. ಪ್ರತೀವರ್ಷ ಇಲ್ಲಿ ಕಾಲೇಜ್ ವಿದ್ಯಾರ್ಥಿನಿಯರ ಚುಡಾವಣೆ ವಿಚಾರಕ್ಕೆ ಸಂಬಂಧಿಸಿ ಹಲ್ಲೆ, ಘರ್ಷಣೆ ತೀರಾ ಸಾಮಾನ್ಯವಾಗಿಬಿಟ್ಟಿದೆ. ಕೆಲವರ್ಷಗಳ ಹಿಂದೆ ಯಾರದ್ದೋ ಮೇಲಿನ ದ್ವೇಷಕ್ಕೆ ಬಲಿಯಾದ ಕಾಟಿಪಳ್ಳದ ವಿದ್ಯಾರ್ಥಿ ತಂಝೀಮ್ ಕೂಡಾ ಇದೇ ಕಾಲೇಜ್ ವಿದ್ಯಾರ್ಥಿ ಎನ್ನುವುದು ಗಮನಾರ್ಹ ಸಂಗತಿ.
ಕೇವಲ ಚುಡಾವಣೆ, ಸಣ್ಣಪುಟ್ಟ ಹಲ್ಲೆ ಪ್ರಕರಣಗಳೇ ಗಲಭೆಯ ಮಟ್ಟಿಗೆ ಬೆಳೆಯುವುದು ಇಲ್ಲಿನ ಜನರಿಗೆ ಹೊಸದೇನಲ್ಲ. ಹೀಗಿರುವಾಗ ಕಾಲೇಜ್ ಆಡಳಿತ ಮಂಡಳಿ, ಪೊಲೀಸ್ ಇಲಾಖೆ ಕೂಡಾ ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ಮಕ್ಕಳನ್ನು ಬೇಕಾದಂತೆ ಆಟವಾಡಿಕೊಂಡಿರಲು ಬಿಟ್ಟಿದ್ದಾರೆ ಎಂದರೆ ಅತಿಶಯವಲ್ಲ. ಕಾಲೇಜ್ ಆಡಳಿತ ಮಂಡಳಿ ಪ್ರತೀವರ್ಷ ಕಾಲೇಜು ಇಂಥದ್ದೊಂದು ಕುಖ್ಯಾತಿಗೆ ಈಡಾಗುತ್ತಿದ್ದರೂ ಸಕಾಲಿಕ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಅನ್ನೋದೇ ಬೇಸರದ ಸಂಗತಿ. ಕಾಲೇಜ್ ವಿದ್ಯಾರ್ಥಿಗಳನ್ನು ಹದ್ದುಬಸ್ತಿನಲ್ಲಿಡಲು ಸಾಧ್ಯವಾಗದೆ ಕಾಲೇಜ್ ಕೊಠಡಿಯನ್ನೇ ಮದವೇರಿದ ವಿದ್ಯಾರ್ಥಿಗಳಿಗೆ ಬೆಡ್ ರೂಂ ಮಾಡಿಕೊಟ್ಟಿರುವ ಆಡಳಿತ ಮಂಡಳಿ ಸದ್ಯ ನಾಗರಿಕರ ಆಕ್ರೋಶಕ್ಕೂ ತುತ್ತಾಗಿದೆ.
ಪೊಲೀಸರ ನಿರ್ಲಕ್ಷ್ಯ ಗಲಭೆಗೆ ಹೇತುವಾದೀತೇ?
ಗೋವಿಂದದಾಸ ಕಾಲೇಜಿನಲ್ಲಿ ಪ್ರತೀಬಾರಿ ಹಲ್ಲೆ, ಚುಡಾವನೆ, ಅನೈತಿಕ ಚಟುವಟಿಕೆಗಳು ನಡೆದಾಗಲೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದೆ ರಾಜಕೀಯ ನಾಯಕರ ಮಾತನ್ನು ಕೇಳಿ ಒಂದು ಸಮುದಾಯದ ಪರವಹಿಸಿ ನಿಂತು ಡೀಲ್ ನಡೆಸುವ ಕಾರಣ ಕಾಲೇಜಿನಲ್ಲಿ ಇಂಥ ಘಟನೆ ನಡೆಯುತ್ತಿದೆ ಎಂದು ನಾಗರಿಕರು ಆರೋಪ ಮಾಡುತ್ತಿದ್ದಾರೆ. ಗೋವಿಂದದಾಸ ಕಾಲೇಜ್ ಬರೇ ಇಂಥ ಪ್ರಕರಣದಲ್ಲಿ ಮಾತ್ರ ಮುಂದಿದೆ ಎನ್ನಲಾಗದು, ಯಾಕೆಂದರೆ ಇಲ್ಲಿ ಕಲಿಕೆಯಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳೂ ಸಾಕಷ್ಟಿದ್ದಾರೆ. ವರ್ಷಕ್ಕೊಮ್ಮೆ ಅವರ ಭಾವಚಿತ್ರವನ್ನು ರಸ್ತೆಯ ಬದಿ ಕಟೌಟ್ ಮಾಡಿ ಹಾಕಲಾಗುತ್ತದೆ. ಆದರೆ ಕಾಲೇಜಿನಲ್ಲಿ ನಡೆಯುವ ಇಂಥ ಅನೈತಿಕ ಚಟುವಟಿಕೆಗಳ ಪರಿಣಾಮ ಸಾಧನೆ ಮಾಡಿದ ಪ್ರತಿಭೆಗಳು ಮಸುಕಾಗುತ್ತವೆ ಎನ್ನಲಡ್ಡಿಯಿಲ್ಲ. ಕುಖ್ಯಾತಿ ಪಡೆಯುತ್ತಿರುವ ಕಾಲೇಜಿಗೆ ತಮ್ಮ ಮನೆಯ ಮಕ್ಕಳನ್ನು ಕಳುಹಿಸಲು ಹೆತ್ತವರು, ಪೋಷಕರು ಚಿಂತಿಸುವ ಮುನ್ನ ಕಾಲೇಜ್ ಆಡಳಿತ ಮಂಡಳಿ, ಪೊಲೀಸ್ ಇಲಾಖೆ ಕಠಿಣ ಕ್ರಮ ಜರುಗಿಸಬೇಕಿದೆ.


