ಬಂಟ್ವಾಳ: ಮಹಿಳೆಯರ ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳಂತಹಾ ಘಟನೆಗಳು ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾ ನೀಚ ಕೃತ್ಯಗಳು. ಇವುಗಳನ್ನು ಸೂಕ್ತಕಾನೂನುಗಳ ನೆರವಿನಿಂದ ಸದೆಬಡೆಯುವ ಪ್ರಯತ್ನ ಆಗಬೇಕಿದೆ, ಜಾಗೃತ ಸಮಾಜ ಈ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆಯ ಜೊತೆ ಕೈಜೋಡಿಸಬೇಕಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ತಾಲೂಕು ಪಂಚಾಯತ್ ಬಂಟ್ವಾಳ ಹಾಗೂ ಸಮಗ್ರ ಶಿಶು ಅಭಿವೃದ್ದಿ ಯೋಜನೆ ಇವುಗಳ ಜಂಟಿ ಆಶ್ರಯದಲ್ಲಿ ಶನಿವಾರ ಬಂಟ್ವಾಳದ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಮಾರಾಟ ಸಾಗಾಟ ತಡೆ ಕುರಿತಾದ ಬೃಹತ್ ಆಂದೋಲನದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಒದಗಿಸುವ ವಿಚಾರ ಕೇವಲ ಭಾಷಣದ ವಸ್ತುವಾಗದೆ ನಿಜಾರ್ಥದಲ್ಲಿ ಅನುಷ್ಠಾನಗೊಳ್ಳಬೇಕು ಎಂದ ಅವರು, ಪ್ರತಿಯೋರ್ವರೂ ಶಿಕ್ಷಣವಂತರಾದಾಗ ಶೋಷಣೆ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಬಂಟ್ವಾಳ ತಾ.ಪಂ. ಅಧ್ಯಕ್ಷ ಯಶವಂತ ದೇರಾಜೆ ಅಧ್ಯಕ್ಷತೆ ವಹಿಸಿದ್ದರು.ಬಂಟ್ವಾಳ ಜೆ.ಎಂ.ಎಫ್.ಸಿ. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜಯಪ್ರಕಾಶ್ ಡಿ.ಆರ್, ಸಮಾರೋಪ ಭಾಷಣ ಮಾಡಿದರು.
ವೇದಿಕೆಯಲ್ಲಿ ಜಿಲ್ಲಾಪಂಚಾಯತ್ ಸದಸ್ಯರಾದ ಮಮತಾ ಟ್ಟಿ, ಚಂದ್ರಪ್ರಕಾಶ್ ಶೆಟ್ಟಿ, ಚೆನ್ನಪ್ಪ ಕೋಟ್ಯಾನ್, ಬಂಟ್ವಾಳ ಪುರಸಭಾ ಅಧ್ಯಕ್ಷೆ ವಸಂತಿಚಂದಪ್ಪ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್, ಸದಸ್ಯರಾದ ಆನಂದ ಶಂಭೂರು, ಎಫ್ರೆಮ್ ಸಿಕ್ವೇರಾ, ದಿನೇಶ್ ಅಮ್ಟೂರು, ತಹಶೀಲ್ದಾರ್ ಮಹಮ್ಮದ್ ಇಸಾಖ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದಾ ಮೊದಲಾದವರು ಉಪಸ್ಥಿತರಿದ್ದರು.
ಸಭಾಕಾರ್ಯಕ್ರಮದ ಆರಂಭದಲ್ಲಿ ಬಿ.ಸಿ.ರೋಡು ಸ್ತ್ರೀ ಶಕ್ತಿ ಭವನದಿಂದ ಬಂಟ್ವಾಳ ಮಂಜುನಾಥ ಕಲ್ಯಾಣ ಮಂಟಪದವರೆಗೆ ಬೃಹತ್ ಜಾಗೃತಿ ಜಾಥಾ ನಡೆಯಿತು. ಜೆ.ಎಂ.ಎಫ್.ಸಿ. ಹಿರಿಯ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ಎಂ ಜಾಥಾವನ್ನು ಉದ್ಘಾಟಿಸಿದರು. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಪುರಸಭಾ ಸದಸ್ಯ ಮಹಮ್ಮದ್ ನಂದರಬೆಟ್ಟು, ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಗಟ್ರೂಡ್ ವೇಗಸ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಉಮೇಶ್ ನಿರ್ಮಲ್ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಮಾರಾಟ-ಸಾಗಾಟದ ಕುರಿತಾಗಿ ಉಪನ್ಯಾಸ ನೀಡಿದರು. ಪತ್ರಕರ್ತ ಮೌನೇಶ್ ವಿಶ್ವಕರ್ಮ ಮಾರ್ಗದರ್ಶನದಲ್ಲಿ ಕೆದ್ದಳಿಕೆ ಶಾಲೆಯ ವಿದ್ಯಾರ್ಥಿಗಳು ಮಕ್ಕಳು ಮಾರಾಟಕ್ಕಲ್ಲ ಎನ್ನುವ ಜಾಗೃತಿ ನಾಟಕವನ್ನು ಅಭಿನಯಿಸಿದರು.
ಬಂಟ್ವಾಳ ಶಿಶುಅಭಿವೃದ್ದಿ ಯೋಜನಾಧಿಕಾರಿ ಮಲ್ಲಿಕಾ ಸ್ವಾಗತಿಸಿದರು. ಪುಷ್ಪಲತಾ ವಂದಿಸಿದರು. ಸಹಾಯಕ ಶಿಶುಅಭಿವೃದ್ದಿ ಯೋಜನಾಧಿಕಾರಿಗಳಾದ ಗಾಯತ್ರಿಕಂಬಳಿ, ಅನ್ನಪೂರ್ಣ ಕಾರ್ಯಕ್ರಮ ನಿರ್ವಹಿಸಿದರು.
ಚಿತ್ರ; ಕಿಶೋರ್ ಪೆರಾಜೆ
