ಬಂಟ್ವಾಳ: ಸುಮಾರು 10ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಲ್ಲಡ್ಕ ಶ್ರೀರಾಮ ಮಂದಿರದ ಶಿಲಾಮಯ ಗರ್ಭಗುಡಿಗೆ ಮಾ.4ರಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಶಿಲಾನ್ಯಾಸ ನೆರವೇರಿಸಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಫೆ.21ರಿಂದ ಮಾ.3ರ ವರೆಗೆ ಪರಿಸರದ 5 ವಿವಿಧ ಭಜನಾ ಮಂದಿರಗಳಿಂದ ಶ್ರೀರಾಮ ಜ್ಯೋತಿ ಹಾಗೂ ಶಿಲಾಪ್ರಧಾನ ಶೋಭಾ ಯಾತ್ರೆಯು ನಡೆಯಲಿದೆ ಎಂದು ಮಂದಿರದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಕೃಷ್ಣ ಮಂದಿರ ಅಮ್ಟೂರು, ಉಮಾಶಿವ ಕ್ಷೇತ್ರ ಗೇರುಕಟ್ಟೆ, ಶ್ರೀ ಗಣೇಶ ಮಂದಿರ ಗೋಳ್ತಮಜಲು, ಶ್ರೀ ಮಣಿಕಂಠ ಭಜನಾ ಮಂದಿರ ಕುದ್ರೆಬೆಟ್ಟು, ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ತುಳಸಿವನ ಇಲ್ಲಿಂದ ಶ್ರೀರಾಮ ಜ್ಯೋತಿ ಯಾತ್ರೆ ಶನಿವಾರ ದಿಂದ ನಡೆಯಲಿದ್ದು, ಬಾಳ್ತಿಲ, ಗೋಳ್ತಮಜಲು, ವೀರಕಂಭ, ಬೋಳಂತೂರು, ಅಮ್ಟಾರು, ಪಾಣೆಮಂಗಳೂರು ಗ್ರಾಮ ವ್ಯಾಪ್ತಿಯ ಸುಮಾರು 2500 ಮನೆಗಳನ್ನು ಈ ಯಾತ್ರೆ ಸಂಪರ್ಕಿಸಲಿದೆ ಎಂದರು.
ಮಾರ್ಚ್ 4 ರಂದು ಬೆಳಿಗ್ಗೆ 8.30 ರಿಂದ ಈ ಐದು ಮಂದಿರಗಳಿಂದ ಶ್ರೀರಾಮ ಜ್ಯೋತಿ ಯಾತ್ರೆ ಮತ್ತು ಶ್ರೀರಾಮ ಶಿಲೆಯ ಯಾತ್ರೆ ನಡೆಯಲಿದೆ. ವಿಶೇಷವಾಗಿ ಶಿಲಾನ್ಯಾಸದಂದು ಪ್ರತಿ ಮನೆಯವರಿಗೆ ಒಂದು ಕುಡ್ತೆ ಹಸುವಿನ ಹಾಲನ್ನು ತಾವೇ ತಂದು ಶಿಲಾನ್ಯಾಸದ ಶಿಲೆಗೆ ಅಭಿಷೇಕ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದ ಅವರು, ಈ ಸಮಾರಂಭದಲ್ಲಿ ಚಿಕ್ಕಮಗಳೂರು ವೇದವಿಜ್ಞಾನ ಮಂದಿರದ ಪೂರ್ವೋತ್ತ ಮೀಮಾಂಸಕರಾದ ಕೆ.ಎಸ್.ನಿತ್ಯಾನಂದ ಸ್ವಾಮೀಜಿ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಈ ಭಜನಾ ಮಂದಿರದ ಮುಂಭಾಗದಲ್ಲಿ ಶ್ರೀರಾಮ, ಸೀತೆ, ಲಕ್ಷಣ, ಹನುಮಂತ ವಿಗ್ರಹ ಸೇರಿದಂತೆ ಸ್ವಾಗತ ಗೋಪುರ, ಸಭಾಭವನ, ಅನ್ನಛತ್ರ ನಿರ್ಮಾಣಗೊಳ್ಳಲಿದ್ದು, ಭವಿಷ್ಯದಲ್ಲಿ ಧ್ಯಾನ ಮಂದಿರವನ್ನು ನಿರ್ಮಿಸುವ ಚಿಂತನೆಯಿದೆ ಎಂದು ಹೇಳಿದ ಡಾ.ಭಟ್ ಅವರು, ಮುಂದಿನ ವರ್ಷ ಶ್ರೀರಾಮ ನವಮಿಯೊಳಗಾಗಿ ಈ ಎಲ್ಲಾ ಯೋಜನೆಗಳು ಪೂರ್ಣಗೊಳಿಸಲು ಸಂಕಲ್ಪಿಸಲಾಗಿದೆ ಎಂದರು.
1974ರಲ್ಲಿ ಹಂಚಿನ ಛಾವಣಿಯ ಕಟ್ಟಡದಲ್ಲಿ ಆರಂಭಗೊಂಡ ಶ್ರೀರಾಮ ಭಜನಾ ಮಂದಿರವನ್ನು ಪೇಜಾವರ ಶ್ರೀಯವರು ಉದ್ಘಾಟಿಸಿದ್ದರು. ಬಳಿಕ ಈ ಮಂದಿರ ಹಿಂದು ಸಮಾಜದ ಶಕ್ತಿಕೇಂದ್ರವಾಗಿ ಬೆಳೆದಿದೆ. ಪ್ರತಿವರ್ಷ ಶ್ರೀ ಸತ್ಯನಾರಾಯಣ ಪೂಜೆ, 82ವರ್ಷಗಳಿಂದ ಶ್ರೀಕೃಷ್ಣಾಷ್ಟಮಿ, 39ವರ್ಷಗಳಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ, ಶ್ರೀರಾಮನವಮಿ, ಅಯ್ಯಪ್ಪ ವೃತ್ತಾಚರಣೆ, ವಾರದ ಭಜನೆ, ನಗರ ಭಜನೆ ಮೊದಲಾದ ಧಾರ್ಮಿಕ ಚಟುವಟಿಕೆಯು ಈ ಮಂದಿರದಲ್ಲಿ ನಡೆಯುತ್ತಿದ್ದೆ. ಹಾಗೆಯೇ ಆರ್‍ಎಸ್‍ಎಸ್‍ನ ನಿತ್ಯ ಶಾಖೆ, ರಾಷ್ಟ್ರ ಸೇವಿಕ ಸಮಿತಿಯ ಶಾಖೆಗಳ ಮೂಲಕ ಸಾಮಾಜಿಕ, ಸಾಂಸ್ಕøತಿಕ ಕೇಂದ್ರವಾಗಿಯೂ ಶ್ರೀ ರಾಮ ಭಜನಾ ಮಂದಿರ ಬೆಳೆದಿದೆ. ಶಿಕ್ಷಣ, ಸಂಸ್ಕಾರ ಕ್ಷೇತ್ರದಲ್ಲಿ ರಾಜ್ಯಾದ್ಯಂತ ಹೆಸರುವಾಸಿಯಾದ ಶ್ರೀರಾಮ ವಿದ್ಯಾಕೇಂದ್ರವು ಇದೇ ಸ್ಥಳದಲ್ಲಿ ಜನ್ಮ ತಾಳಿತೆಂದು ಅವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜೀತೇಂದ್ರ ಕೊಟ್ಟಾರಿ, ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ, ವಿವಿಧ ಸಮಿತಿ ಪದಾಧಿಕಾರಿಗಳಾದ ಎ.ರುಕ್ಮಯ ಪೂಜಾರಿ, ಚೆನ್ನಪ್ಪ ಕೋಟ್ಯಾನ್, ಕೆ.ಕೃಷ್ಣಪ್ಪ, ಸೂರ್ಯ ನಾರಾಯಣ ಭಟ್, ನಾಗೇಶ್ ಮೊದಲಾದವರಿದ್ದರು.
