ಬಂಟ್ವಾಳ: ಸರ್ಕಾರಿ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಕೀಳರಿಮೆಯನ್ನು ಬಿಟ್ಟು ಸೆಟೆದು ನಿಲ್ಲಬೇಕು, ಅವಕಾಶಗಳ ಸದುಪಯೋಗಪಡಿಸಿಕೊಂಡು ಎಲ್ಲಾ ಕ್ಷೇತ್ರಗಳಲ್ಲಿಯೂ ಮುನ್ನಡೆ ಸಾಧಿಸಬೇಕು ಎಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಕರೆ ನೀಡಿದ್ದಾರೆ.

alva
ಸರಕಾರಿ ಪ್ರ.ದರ್ಜೆ ಕಾಲೇಜು ಬಂಟ್ವಾಳ ಇದರ ಆಶ್ರಯದಲ್ಲಿ ಗುರುವಾರ ಕಾಲೇಜಿನ ಆವರಣದಲ್ಲಿ ನಡೆದ 3ನೇ ವರ್ಷದ ದ.ಕ.ಜಿಲ್ಲಾ ಮಟ್ಟದ ಅಂತರ್ ಸರಕಾರಿ ಕಾಲೇಜು ‘ಕಲಾ ಸಿಂಚನ’ ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ನಾವು ಗ್ರಾಮೀಣ ಮಕ್ಕಳು, ಸರ್ಕಾರಿ ಕಾಲೇಜು, ಬಡ ಮಕ್ಕಳು” ಎಂದು ಕೊರಗುವುದನ್ನು ಬಿಟ್ಟು ಬಿಡಿ ಎಂದು ಕಿವಿ ಮಾತು ಹೇಳಿದ ಅವರು, ಸರ್ಕಾರ ಪ್ರತೀ ವಿದ್ಯಾರ್ಥಿಗೆ ವಾರ್ಷಿಕ 30 ಸಾವಿರದಷ್ಟು ವೆಚ್ಚ ಮಾಡುತ್ತಿದ್ದು, ಇದನ್ನು ಸಾರ್ಥಕಗೊಳಿಸಲು ಸಂಕಲ್ಪ ತೊಡಬೇಕೆಂದರು. ಕಲಾಸಿಂಚನ ದಂತಹ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಸೌಂದರ್ಯ ಪ್ರಜ್ಞೆ ಹೆಚ್ಚುತ್ತದೆ ಎಂದು ಸಂಘಟಕರನ್ನು ಶ್ಲಾಘಿಸಿದ ಅವರು, ಶಿಕ್ಷಣದ ಜೊತೆಯಲ್ಲಿ ಸಾಹಿತ್ಯ, ಕ್ರೀಡೆ, ಸಂಗೀತ ಜೊತೆಜೊತೆಯಲ್ಲಿ ಸಾಗಲಿ, ಈ ನಿಟ್ಟಿನಲ್ಲಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಹೊಸಕಾಯಕಲ್ಪ ನೀಡಬೇಕೆಂದು ಅವರು ಆಶಯ ವ್ಯಕ್ತಪಡಿಸಿದರು. ಬೆರಳೆಣಿಕೆಯ ಸರ್ಕಾರಿ ಕಾಲೇಜುಗಳು ಹೊರತು ಪಡಿಸಿ, ಉಳಿದ ಸರ್ಕಾರಿ ಕಾಲೆಜು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಂಸ್ಕøತಿಕವಾಗಿ ಮುನ್ನಡೆ ಸಾಧಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಕಾಳಜಿವಹಿಸುವಂತೆಯೂ ಸಲಹೆ ನೀಡಿದರು.
ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಧ್ಯಕ್ಷತೆ ವಹಿಸಿದ್ದರು, ಅವರು ಮಾತನಾಡಿ ಈ ದೇಶದ ಉತ್ತರಾಧಿಕಾರಿಗಳಾದ ಯುವಜನಾಂಗಕ್ಕೆ ಸರಿಯಾದ ಮಾರ್ಗದರ್ಶನ ಇಲ್ಲದಿರುವುದು ದೇಶದ ದೊಡ್ಡ ದುರಂತ ಎಂದರು. ಮನುಷ್ಯತ್ವದ ಜೊತೆಗೆ ಸಾಂಸ್ಕøತಿಕ ತನ ಜೊತೆಗಿದ್ದರೆ ಮಾತ್ರ ಸುಂದರ ಬದುಕು ರೂಪುಗೊಳ್ಳಲು ಸಾಧ್ಯ ಎಂದರು.
ವೇದಿಕೆಯಲ್ಲಿ ಕಾಲೇಜು ಅಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷ ಸದಾಶಿವ ಬಂಗೇರ, ಕಾಲೆಜಿನ ಪ್ರಾಂಶುಪಾಲ ಡಾ.ಗಿರೀಶ್ ಭಟ್ ಅಜೆಕ್ಕಳ , ವಿದ್ಯಾರ್ಥಿಗಳಾದ ಸತೀಶ್, ಅಶ್ವಿನಿ, ಸ್ವಾತಿ ಉಪಸ್ಥಿತರಿದ್ದರು. ಕಲಾ ಸಿಂಚನದ ಸಂಚಾಲಕ ಲೂಯೀಸ್ ಮನೋಜ್ ಎಂಬ್ರೋಸ್ ಪ್ರಸ್ತಾವಿಸಿದರು. ವಿದ್ಯಾರ್ಥಿನಿ ಲಿಖಿತಾ ಸ್ವಾಗತಿಸಿ, ನಮಿತಾ ವಂದಿಸಿದರು. ವಿದ್ಯಾರ್ಥಿಗಳಾದ ತಾರಾ, ಶಿವಾನಂದ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *