ಬಂಟ್ವಾಳ ಪೇಟೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂಪೂರ್ಣ ಶಿಲಾಮಯಗೊಂಡು ಕಂಗೊಳಿಸುತ್ತಿದೆ.
ಜಿಲ್ಲೆಯ ಜೀವನದಿ ನೇತ್ರಾವತಿ ತೀರ ಮತ್ತು ಬಂಟ್ವಾಳ ಪೇಟೆಗೆ ಹೊಂದಿಕೊಂಡಿರುವ ಸುಮಾರು 800 ವರ್ಷಗಳ ಹಿನ್ನೆಲೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಕರ್ಷಕ ಕೆತ್ತನೆಗಳಿಂದ ಸಂಪೂರ್ಣ ಶಿಲಾಮಯಗೊಂಡು ಇಂದು(ಬುಧವಾರ) ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿದೆ.

ಸುಮಾರು 800 ವರ್ಷಗಳ ಹಿಂದೆ ಖರಾಸುರ ದೇವಸ್ಥಾನ ನಿರ್ಮಿಸಿದ್ದಾನೆ ಎಂಬ ಪ್ರತೀತಿ ಇದೆ.ಪ್ರತಿಷ್ಠಾಪಿಸಿದ ಪ್ರತೀತಿಯೂ ಇದೆ. ಬಂಟ್ವಾಳ ಮತ್ತು ಸುತ್ತಮುತ್ತಲಿನ ನಾಲ್ಕು ಗ್ರಾಮಗಳಿಗೆ ಏಕೈಕ ‘ಶಿವಾಲಯ’ ಆಗಿರುವ ಈ ದೇಗುಲ ಭಾರೀ ಕಾರಣಿಕ ಕ್ಷೇತ್ರವಾಗಿಯೂ ಗುರುತಿಸಿಕೊಂಡಿದೆ. ಕಳೆದ 1923ರಲ್ಲಿ ನೇತ್ರಾವತಿ ನದಿ ಉಕ್ಕಿ ಹರಿದು ಪ್ರವಾಹ ಉಂಟಾಗಿ ಬಂಟ್ವಾಳ ಪ್ರದೇಶವಿಡೀ ‘ದ್ವೀಪವಾಗಿ ಪರಿವರ್ತನೆ’ಗೊಂಡ ವೇಳೆ ಇಲ್ಲಿನ ನಾಗರಿಕರಿಗೆ ಆಶ್ರಯ ನೀಡಿದ ಹಿರಿಮೆಯೂ ಇಲ್ಲಿಗೆ ಇದೆ.
ಇಲ್ಲಿನ ದೇವಳದ ಗರ್ಭಗುಡಿಯಲ್ಲಿ ಪೂರ್ವಭಿಮುಖವಾಗಿ ಶಿವನ ವಿಗ್ರಹ ಮತ್ತು ಪಶ್ಚಿಮಾಭಿಮುಖವಾಗಿ ಗಣೇಶನ ವಿಗ್ರಹ ಪ್ರತಿಷ್ಠಾಪನೆ ವಿಶೇಷತೆಯಾಗಿದೆ. ಇನ್ನೊಂದೆಡೆ ಜುಮಾದಿ ಬಂಟ ದೈವ, ಅಶ್ವತ್ಥಕಟ್ಟೆ, ನಾಗನಕಟ್ಟೆ ಕ್ಷೇತ್ರ ಸಾನಿಧ್ಯ ವೃದ್ಧಿಸಿ ಭಕ್ತರನ್ನು ಆಕರ್ಷಿ ಸುತ್ತಿದೆ.
ಈ ಹಿಂದೆ 1984ರಲ್ಲಿ ಪ್ರಥಮ ಬಾರಿಗೆ ಬ್ರಹ್ಮಕಲಶೋತ್ಸವ ಕಂಡಿದ್ದ ದೇವಾಲಯದಲ್ಲಿ 2006ರಲ್ಲಿ ಮತ್ತೆ ಶಿಲಾಮಯ ಗರ್ಭಗುಡಿ ಮತ್ತು ತೀರ್ಥಮಂಟಪ ನಿರ್ಮಿಸಿ ಬ್ರಹ್ಮಕಲಶೋತ್ಸವ ಸಂಭ್ರಮ ನಡೆದಿತ್ತು.
1997ರಲ್ಲಿ ‘ಮಾಂಗಲ್ಯ ಕಲ್ಯಾಣ ಮಂಟಪ’ ನಿರ್ಮಿಸಿ ಹರಿಕಥೆ, ಯಕ್ಷಗಾನ, ತಾಳಮದ್ದಳೆ, ಪ್ರವಚನ, ಶಾಸ್ತ್ರೀಯ ಸಂಗೀತ, ನೃತ್ಯ, ದಾಸವಾಣಿ, ವೇದಾಧ್ಯಯನ ಹೀಗೆ ನಿರಂತರ ಶಿಬಿರಗಳು ನಡೆಯುತ್ತಿದೆ.
ಪ್ರತೀ ವರ್ಷ ರಥೋತ್ಸವ, ಮಹಾಶಿವರಾತ್ರಿ, ಲಕ್ಷದೀಪೋತ್ಸವ ಮತ್ತಿತರ ಜಾತ್ರೆ ಉತ್ಸವಗಳು ಭಕ್ತರನ್ನು ಸೆಳೆಯುತ್ತಿದೆ.
ಇದೀಗ ಒಟ್ಟು ರೂ 2.5ಕೋಟಿ ವೆಚ್ಚದಲ್ಲಿ ಆಕರ್ಷಕ ಕೆತ್ತನೆ ಸಹಿತ ಶಿಲಾಮಯ ಸುತ್ತುಪೌಳಿ, ತಾಮ್ರ ಕವಚ ಸಹಿತ ಧ್ವಜಸ್ತಂಭ ಪ್ರತಿಷ್ಠೆ, ಹೊರಾಂಗಣ ಹಾಸುಗಲ್ಲು, ಮೇಲ್ಛಾವಣಿಗೆ ತಂಪು ಶೀಟು ಅಳವಡಿಸಿ ಸಂಭ್ರಮ ಸಡಗರದಿಂದ ಬ್ರಹ್ಮಕಲಶೋತ್ಸವ ನಡೆಯುತ್ತಿದೆ.
ಈಗಾಗಲೇ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಭೇಟಿ ನೀಡಿ ಬ್ರಹ್ಮಕಲಶೋತ್ಸವಕ್ಕೆ ಸೂಕ್ತ ಮಾರ್ಗದರ್ಶನ ನೀಡಿದ್ದು, ಬ್ರಹ್ಮಶ್ರೀ ಪೊಳಲಿ ಸುಬ್ರಹ್ಮಣ್ಯ ತಂತ್ರಿ ಮತ್ತು ವಾಸ್ತುತಜ್ಞ ಮಹೇಶ ಮುನಿಯಂಗಳ ನೇತೃತ್ವದಲ್ಲಿ ಬುಧವಾರ ಬ್ರಹ್ಮಕಲಶೋತ್ಸವ ನಡೆಯಲಿದ್ದು, ವಿವಿಧ ಸಮಿತಿ ಸದಸ್ಯರು ಯಶಸ್ವಿಗೆ ಶ್ರಮಿಸುತ್ತಿದ್ದಾರೆ. ಇದೇ ವೇಳೆ ನಡೆಯುವ ಧಾರ್ಮಿಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದು, ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಆಗಮಿಸಿ ಆಶೀರ್ವಚನ ನೀಡುವರು ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ರಮೇಶಾನಂದ ಸೋಮಯಾಜಿ ತಿಳಿಸಿದ್ದಾರೆ
