ಜೀವನ ಸಂದೇಶದ ಕಾವ್ಯಗಳಿಂದ ಬೇಂದ್ರೆ ಅಮರ
ಸುದ್ದಿ9 ಮೂಡುಬಿದರೆ: ಬೌದ್ಧಿಕ ಅಂಶಗಳನ್ನು ಹೃದಯ ಸಂವೇದನೆಯೊಂದಿಗೆ ಸೇರಿಸಿ ಬೇಂದ್ರೆಯವರು ರಚಿಸುವ ಕವನಗಳು ಸಹೃದಯರನ್ನು ಬೇಗನೇ ತಟ್ಟುತ್ತವೆ. ಬೇಂದ್ರೆ ಕಾವ್ಯದ ವಿಶೇಷತೆಯೆಂದರೆ ಅದರಲ್ಲಿರುವ ನಾದ. ಕವಿತೆಯೂ ಒಂದು ಶಿಸ್ತಿನ ಶಿಲ್ಪವಾಗಿದ್ದು ಅದು ಕಲಾಕೃತಿಯಂತೆ ರೂಪುಗೊಳ್ಳಬೇಕೆಂದು ಭಾವಿಸಿ ಅದರಂತೆ ಕಾವ್ಯ ರಚಿಸಿದರು. ಜೀವನದ ಸಂದೇಶಗಳಲ್ಲಿ ಮತ್ತು ತಮ್ಮ ಕಾವ್ಯಗಳಿಂದಾಗಿ ಬೇಂದ್ರೆ ಅಮರ ಎಂದು ಧಾರವಾಡದ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಅಧ್ಯಕ್ಷ ಡಾ. ಶ್ಯಾಮಸುಂದರ್ ಬಿದರಕುಂದಿ ತಿಳಿಸಿದರು.
ಕನ್ನಡ ಸಂಘ ಕಾಂತಾವರದ ನುಡಿನಮನ ಕಾರ್ಯಕ್ರಮದಲ್ಲಿ ಭಾನುವಾರ ಅವರು ವರಕವಿ ದ.ರಾ.ಬೇಂದ್ರೆಯವರ ಕಾವ್ಯದ ಹೊಸ ಓದು’ ಎಂಬ ಬಗ್ಗೆ ಮಾತನಾಡಿದರು.
ಬೇಂದ್ರೆ ಕವಿತೆಗಳಲ್ಲಿ ವಿಚಾರದೊಂದಿಗೆ ಭಾವವೂ ಮಿಳಿತಗೊಂಡಿರುವುದಲ್ಲದೆ ಕಾವ್ಯವನ್ನು ಓದಿದಾಗ ಅದರ ಭಾಷೆ, ಛಂದಸ್ಸು ಮತ್ತು ವಸ್ತು ಹೇಗೆ ಒಂದರೊಳಗೊಂದು ಸೇರಿಕೊಂಡಿದೆ ಅನ್ನುವುದನ್ನು ಕೂಡಾ ತಿಳಿಯಬಹುದಾಗಿದೆ. ಬೇಂದ್ರೆಯವರ ಜೀವನ ಮತ್ತು ಅದರ ಕವನ ಎರಡೂ ಸೇರಿದಾಗ ಅವರ ದರ್ಶನವಾಗುತ್ತದೆ ಎಂದರು.
ಡಾ. ಶ್ಯಾಮಸುಂದರ್ ಬಿದರಕುಂದಿ ಅವರನ್ನು ಕನ್ನಡ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಬೇಂದ್ರೆ ಕಾವ್ಯಾನುಭವ ಎಂಬ ಕಿರುಹೊತ್ತಗೆಯನ್ನು ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಲೋಕಾರ್ಪಣೆಗೊಳಿಸಲಾಯಿತು.
ಬಾಬು ಶೆಟ್ಟಿ ನಾರಾವಿ ಕಾರ್ಯಕ್ರಮ ನಿರ್ವಹಿಸಿದರು. ಡಾ.ನಾ.ಮೊಗಸಾಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಂಜುನಾಥ ಶೆಟ್ಟಿ ಸ್ವಾಗತಿಸಿದರು. ರಾಮಕೃಷ್ಣ ಹೆಗಡೆ ವಂದಿಸಿದರು.
ಉಪನ್ಯಾಸ ಕಾರ್ಯಕ್ರಮದ ಮೊದಲು ಉಡುಪಿಯ ಗಾಯಕ ಶಂಕರದಾಸ್ ಚೆಂಡ್ಕಳ ತಂಡದಿಂದ ಬೇಂದ್ರೆ ಕಾವ್ಯ ಗಾಯನ ಕಾರ್ಯಕ್ರಮವಿತ್ತು. ಲೇಖಕಿಯರಾದ ಜ್ಯೋತಿ ಗುರುಪ್ರಸಾದ್, ರಂಜನಾ ನಾಯಕ್, ಬೇಂದ್ರೆ ಗೀತೆಗಳನ್ನು ಹಾಡಿದರು.
mbd_feb9_4

By suddi9

Leave a Reply

Your email address will not be published. Required fields are marked *