ಕಾಂತಾವರದಲ್ಲಿ ಮೊಗಸಾಲೆ ‘ಮುಖಾಂತರ’ ನಾಡಿಗೆ, ಕಾವ್ಯ ನಮಸ್ಕಾರ
ಮಾವಿನ ಕುಳಿಯವರಿಗೆ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ

ಸುದ್ದಿ9 ಮೂಡುಬಿದಿರೆ: ‘ಕಾವ್ಯ ಕಟ್ಟುವುದಲ್ಲ, ಅದು ಹುಟ್ಟುವುದು’ ಹಾಗಾಗಿ ಗದ್ಯ ಸಾಹಿತ್ಯದಂತೆ ಅದನ್ನು ಸುಲಭವಾಗಿ ಕಟ್ಟಿಕೊಡಲು ಸಾಧ್ಯವಿಲ್ಲ. ಅದು ಅಂತರಂಗದ ಭಾವನೆಗಳು ಪುಟಿದಾಗ ಆಕಸ್ಮಿಕವಾಗಿ ಸಾಲುಗಳು ಹೊಳೆದಾಗಲೇ ಹಿಡಿದಿಟ್ಟುಕೊಂಡು ಕಾವ್ಯವನ್ನಾಗಿಸಬೇಕು ಎಂದು ಸಾಹಿತಿ ಡಾ.ಜಯಪ್ರಕಾಶ್ ಮಾವಿನಕುಳಿ ಹೇಳಿದರು. ಅವರು ಕಾಂತಾವರ ಕನ್ನಡ ಸಂಘದ ವತಿಯಿಂದ ರವಿವಾರ ಕನ್ನಡ ಭವನದಲ್ಲಿ ತಮ್ಮ `ಕಾಲಯಾನ’ ಎಂಬ ಕವನ ಸಂಕಲನ ಹಸ್ತಪ್ರತಿಗೆ ಪಟೇಲ್ ಪುನರೂರು ವಾಸುದೇವರಾವ್ ಟ್ರಸ್ಟ್‍ನ ಪ್ರಾಯೋಜಕತ್ವದಲ್ಲಿ ಕೊಡ ಮಾಡುವ 2014ನೇ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಮಾವಿನಕುಳಿಯವರಿಗೆ ಹತ್ತು ಸಾವಿರದ ಗೌರವ ಸಂಭಾವನೆ ಮತ್ತು ತಾಮ್ರಪತ್ರ ಸಮ್ಮಾನದ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ ಅರ್ಹರನ್ನು ಸಮಾಜ ಮತ್ತು ಸರ್ಕಾರ ಗುರುತಿಸಲು ವಿಫಲವಾಗುತ್ತಿರುವ ಕಾರಣದಿಂದಾಗಿಯೇ ಇಂದು ಪ್ರತಿಭಾ ಪಲಾಯನ ಹೆಚ್ಚಾಗುತ್ತಿದೆ. ಆದರೆ ಪ್ರತಿಯೊಬ್ಬರೂ ತಮ್ಮಲ್ಲಿರುವ ಸ್ವಸಾಮಥ್ರ್ಯವನ್ನು ಸಮಾಜಕ್ಕೆ ನೀಡಬೇಕು ಎಂದರು.

ಕೃತಿ ಅನಾವರಣ:
ಕರ್ಣಾಟಕ ಬ್ಯಾಂಕ್‍ನ ಚೀಫ್ ಜನರಲ್ ಮೆನೇಜರ್ ಎಂ.ಎಸ್ ಮಹಾಬಲೇಶ್ವರ ಭಟ್ ಸರ್ವಾಧ್ಯಕ್ಷತೆಯಲ್ಲಿ ನಡೆದ ಮುದ್ದಣ ಸಾಹಿತ್ಯೋತ್ಸವ ಸಮಾರಂಭದಲ್ಲಿ ಮುದ್ದಣ ಕಾವ್ಯ ಪ್ರಶಸ್ತಿ ಪಡೆದ 40 ಕವಿಗಳ ಆಯ್ದ ಕವನ ಸಂಗ್ರಹ ‘ಕಾವ್ಯ ನಮಸ್ಕಾರ’ ಸಂಪುಟವನ್ನು ಧಾರವಾಡದ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಶ್ಯಾಮಸುಂದರ ಬಿದರಕುಂದಿ ಅನಾವರಣಗೊಳಿಸಿದರು. ಭಾಷೆ ಎನ್ನುವುದೊಂದು ಇತಿಹಾಸ. ಅದು ವರ್ತಮಾನದಲ್ಲಿಯೂ ಬೆಳೆಯಬೇಕು ಎನ್ನುವುದು ಸಾಹಿತ್ಯದ ಉದ್ದೇಶ ಎಂದ ಬಿದರಕುಂದಿ ಹೊಸಗನ್ನಡ ಸಾಹಿತ್ಯದ ಪುನರುತ್ಥಾನ ನಡೆಸಿದ ಹಿರಿಮೆಯೂ ದ.ಕ. ಜಿಲ್ಲೆಯವರದ್ದಾಗಿದೆ ಎಂದರು. ಸಂಪುಟದ ಸಂಪಾದಕ ಡಾ.ವಸಂತ ಕುಮಾರ ಪೆರ್ಲ ಮಾತನಾಡಿ ಕಾವ್ಯವನ್ನು ಚರಿತ್ರೆ ಎಂದು ಪರಿಗಣಿಸುವ ನಾವು ಸಮಕಾಲೀನ ಸಾಹಿತ್ಯವೇ ಚರಿತ್ರೆ ಎನ್ನುವುದನ್ನು ಗಮನಿಸಬೇಕು ಎಂದರು.

ಈ ಸಂದರ್ಭದಲ್ಲಿ ನಾಡಿಗೆ ನಮಸ್ಕಾರದ ಹತ್ತನೇ ಕಂತಿನ ಒಂಭತ್ತು ಹೊತ್ತಗೆಗಳ ಅನಾವರಣವನ್ನು ಮಂಗಳೂರು ಐ.ಜಿ.ಪಿ ಕಛೇರಿಯ ಪೋಲೀಸ್ ಉಪಾಧೀಕ್ಷಕ ಡಾ. ವೆಂಕಟೇಶ ಪ್ರಸನ್ನ ನೆರವೇರಿಸಿ ಮಾತನಾಡಿ ಇತಿಹಾಸದ ದಾಖಲೀಕರಣ ಸರಿಯಾಗಿ ಮಾಡದಿರುವುದು ನಮ್ಮ ಕೊರತೆ. ಇದರ ನಡುವೆ ಸರ್ಕಾರ ಮಾಡಬೇಕಾದ ಕೆಲಸವನ್ನು ಖಾಸಗಿ ಸಂಘಟನೆಯೊಂದು ಕಾಳಜಿಯಿಂದ ಮಾಡುತ್ತಿರುವುದು ಅಭಿನಂದನೀಯ ಎಂದರು. ನಾಡಿಗೆ ನಮಸ್ಕಾರ ಗ್ರಂಥಮಾಲೆಯಲ್ಲಿ ಕೆ.ವಿ.ತಿರುಮಲೇಶ್ (ಲೇ: ಯು.ಮಹೇಶ್ವರಿ) ಕುರಿಯ ವಿಠಲ ಶಾಸ್ತ್ರಿ (ಲೇ: ಜಿ.ಕೆ.ಭಟ್ ಸೇರಾಜೆ) ಅರ್ಕುಳ ಸುಬ್ರಾಯ ಆಚಾರ್ಯ (ಲೇ: ಉಮೇಶ್ ಆಚಾರ್ ಗೇರುಕಟ್ಟೆ) ಬಂಟಕಲ್ಲು ಲಕ್ಷ್ಮೀನಾರಾಯಣ ಶರ್ಮ (ಲೇ: ಬಿ.ಸೀತಾರಾಮ ಭಟ್) ಡಾ.ಕೆ.ಆರ್ ಹಂದೆ (ಲೇ: ರಾಘವೇಂದ್ರ ಹೇರಳೆ) ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ (ಲೇ: ಶ್ಯಾಮಲಾ ಬೇವಿಂಜೆ) ಗೀತಾ ಕುಲಕರ್ಣಿ (ಲೇ: ರಂಜನಿ ನಾಯಕ್) ತುದಿಯಡ್ಕ ವಿಷ್ಣ್ವಯ್ಯ (ಸರೋಜಿನಿ ವಿ.ನಾಗಪ್ಪಯ್ಯ, ಕಾಂತಾವರ) ಪಿ.ಎನ್.ಆಚಾರ್ಯ (ಲೇ: ಶೇಖರ ಅಜೆಕಾರ್) ಕೃತಿಗಳು ಅನಾವರಣಗೊಳಿಸಲಾಯಿತು.

ಡಾ.ನಾ.ಮೊಗಸಾಲೆಯವರ ನೂತನ ಮಹಾಕಾದಂಬರಿ ‘ಮುಖಾಂತರ’ವನ್ನು ಬಿಡುಗಡೆ ಮಾಡಿದ ಎಂ.ಎಸ್ ಮಹಾಬಲೇಶ್ವರ ಭಟ್ ಮಾತನಾಡಿ ಶಾಖಾ ವಿಸ್ತರಣೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಬ್ಯಾಂಕ್ ಕಾಂತಾವರದಲ್ಲಿಯೂ ಶಾಖೆ ತೆರೆಯುವ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದರು.
ನಾಡಿಗೆ ನಮಸ್ಕಾರ ಗ್ರಂಥ ಮಾಲೆಯ ಸಂಪಾದಕ ಬಿ.ಜನಾರ್ಧನ ಭಟ್ ಉಪಸ್ಥಿತರಿದ್ದರು. ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ. ನಾ, ಮೊಗಸಾಲೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಹಾಗೂ ಸರೋಜಿನಿ ಕಾಂತಾವರ ಕಾರ್ಯಕ್ರಮ ನಿರ್ವಹಿಸಿದರು. ಬಿ. ಮಂಜುನಾಥ ಶೆಟ್ಟಿ ವಂದಿಸಿದರು. ಅಪರಾಹ್ನ ಪ್ರಸಿದ್ಧ ಗಾಯಕ ಉಡುಪಿಯ ಶಂಕರದಾಸ್ ಚೆಂಡ್ಕಳರಿಂದ ಬೇಂದ್ರೆ ಕಾವ್ಯಗಾಯನ, ತಿಂಗಳ ಉಪನ್ಯಾಸ ‘ನುಡಿನಮನ’ 86ರಲ್ಲಿ ಡಾ. ಶ್ಯಾಮಸುಂದರ ಬಿದರಕುಂದಿ ಬೇಂದ್ರೆ ಕಾವ್ಯದ ಹೊಸ ಓದು ಕುರಿತ ಉಪನ್ಯಾಸ ನಡೆಯಿತು.

IMG_1503

DSC_0017

By Suddi9

Leave a Reply

Your email address will not be published. Required fields are marked *