ಪಾಲಡ್ಕ ಕಂದಾಯ ಅದಾಲತ್‍ನಲ್ಲಿ ಕೃಷಿಕರ ಬೇಡಿಕೆ
ಸುದ್ದಿ9 ಮೂಡುಬಿದಿರೆ : ಕಡಂದಲೆಯು ಹೈನುಗಾರಿಕೆ ಮತ್ತು ಹಾಲಿನ ಗುಣಮಟ್ಟದಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಆದರೆ ಇಲ್ಲಿ ಹೈನುಗಾರಿಕೆಗೆ ಬೇಕಾದ ಹಸಿ ಹುಲ್ಲನ್ನು ಬೆಳೆಸಲು ಜಾಗದ ಕೊರತೆ ಇದೆ ಈ ಬಗ್ಗೆ ಮೂಡುಬಿದಿರೆಯಲ್ಲಿ ನಡೆದ ಕಂದಾಯ ಅದಾಲತ್‍ನಲ್ಲಿ ಮನವಿ ನೀಡಿದರೂ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಹೈನುಗಾರಿಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಜಾಗ ನೀಡಬೇಕೆಂದು ಕೃಷಿಕರ ಪರವಾಗಿ ಜಿ.ಪಂ.ಮಾಜಿ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಆಗ್ರಹಿಸಿದರು.
ಅವರು ಪಾಲಡ್ಕ ಗ್ರಾ.ಪಂನ ವತಿಯಿಂದ ಮಂಗಳವಾರ ಕಡಂದಲೆ ಗಣೇಶ ದರ್ಶನ ಸಭಾಭವನದಲ್ಲಿ ಗ್ರಾ.ಪಂ ಅಧ್ಯಕ್ಷ ಸತೀಶ್ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಂದಾಯ/ಪಿಂಚಣಿ ಅದಾಲತ್‍ನಲ್ಲಿ ಈ ಬಗ್ಗೆ ತಹಶೀಲ್ದಾರ್ ಅವರ ಗಮನಕ್ಕೆ ತಂದರು.
ಪಂಚಾಯತ್ ವ್ಯಾಪ್ತಿಯಲ್ಲಿರುವ ಗೋಮಾಳ ಜಾಗವನ್ನು ಪಶು ಸಂಗೋಪನೆ ಇಲಾಖೆಗೆ ಹಸ್ತಾಂತರಿಸಬೇಕೆಂದು ಸರಕಾರದ ಸೂಚನೆ ಇದೆ ಆದ್ದರಿಂದ ಗೋಮಾಳ ಜಾಗವನ್ನು ಗುರುತಿಸಿ ಹಸ್ತಾಂತರಿಸಿದ ನಂತರ ಆ ಜಾಗವನ್ನು ತಾವು ಹಸಿ ಹುಲ್ಲು ಬೆಳೆಸಲು ಉಪಯೋಗಿಸಬಹುದು ಎಂದು ತಹಶೀಲ್ದಾರ್ ಮಹಮ್ಮದ್ ಇಸಾಕ್ ತಿಳಿಸಿದರು.
ಕಡಂದಲೆಯಲ್ಲಿ ತಮಗೆ ನೀಡಿರುವ ಸರಕಾರಿ ಜಾಗದಲ್ಲಿ ಕೆಲವರು ಮನೆ ಕಟ್ಟಿ ಕುಳಿತುಕೊಂಡಿದ್ದಾರೆ ಆದರೆ ಅವರಿಗೆ ಹಕ್ಕುಪತ್ರವಿಲ್ಲ. ಇನ್ನು ಕೆಲವರಿಗೆ ಜಾಗವಿದೆ ಆದರೆ ಆರ್‍ಟಿಸಿ ಸಿಗುತ್ತಿಲ್ಲ ಇದರಿಂದಾಗಿ ಮನೆ ನಿರ್ಮಿಸಲು ತೊಂದರೆಯಾಗುತ್ತಿದೆ ಇದನ್ನು ಸರಿಪಡಿಸಿ ಕೊಡಿ ಎಂದು ಫಲಾನುಭವಿಗಳು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಅವರು ಇಂತಹ ಸಮಸ್ಯೆ ದ.ಕ ಜಿಲ್ಲೆಯಲ್ಲಿ ಹೆಚ್ಚಾಗಿದೆ ಹಿಂದೆ ನಿವೇಶನ ನೀಡುವಾಗ ಸರ್ವೇ ನಂಬರ್ ಬದಲಾವಣೆಯಾಗಿದೆ ಅಲ್ಲದೆ ಫಲಾನುಭವಿಗಳು ಸಿಕ್ಕಿದ ಜಾಗದಲ್ಲಿ ಮನೆ ನಿರ್ಮಿಸಿ ಕುಳಿತುಕೊಂಡು ಹಕ್ಕು ಪತ್ರ ಪಡೆದು ಖಾಸಗಿಯಾಗಿರುವುದರಿಂದ ಅದನ್ನು ವಜಾ ಮಾಡುವ ಹಕ್ಕು ತಮಗಿಲ್ಲ ಆದರೆ ಇದೀಗ ಇರುವ ಸರ್ವೇ ನಂಬರ್ 356ರ ಖಾತೆದಾರರನ್ನು ವಜಾ ಮಾಡಿ 194 ಸರ್ವೆ ನಂಬರ್‍ಗೆ ಪರಿವರ್ತನೆ ಮಾಡಿ ನೀಡುವ ಅವಕಾಶವಿದೆ ಆಗ ಈ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಭರವಸೆಯನ್ನು ನೀಡಿದರಲ್ಲದೆ ಸರ್ವೆಯರ್ ಆದಷ್ಟು ಬೇಗನೇ ಜಾಗವನ್ನು ಅಳತೆ ಮಾಡಬೇಕೆಂದು ಸೂಚಿಸಿದರು.
ಪೂಪಾಡಿಕಲ್ಲಿನಲ್ಲಿ ವಲೇರಿಯನ್ ಮತ್ತು ಲೀನಾ ದಾಂತೀಸ್ ಎಂಬವರು ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿ ರಸ್ತೆಯಲ್ಲಿಯೇ ಮನೆ ನಿರ್ಮಿಸಿದ್ದಾರೆ ಅಲ್ಲದೆ ಕಸ ಕಡ್ಡಿಗಳನ್ನು ತಮ್ಮ ಮನೆ ಮುಂದೆಯೇ ಹಾಕಿ ತಮನೆ ತೊಂದರೆಯನ್ನು ಮಾಡುತ್ತಿದ್ದಾರೆ. ಅಲ್ಲದೆ ಸ್ವಂತ ಜಮೀನಿದ್ದರೂ ಸರಕಾರಿ ಜಾಗವನ್ನು ಪಡೆದು ಮನೆ ನಿರ್ಮಿಸಿದ್ದಾರೆ ಅಲ್ಲದೆ ಕೆಲವರು ಸರಕಾರಿ ಜಾಗವನ್ನು ಪಡೆದು ಮನೆ ನಿರ್ಮಿಸಿ ಮಾರಾಟ ಮಾಡುತ್ತಿದ್ದಾರೆ ಈ ಬಗ್ಗೆ ತನಿಖೆ ನಡೆಸಬೇಕೆಂದು ಶಿಕ್ಷಕಿ ಸುಗುಣಮ್ಮ ಆಗ್ರಹಿಸಿದರು. ಈ ಬಗ್ಗೆ ಸರಿಯಾದ ದಾಖಲೆಗಳನ್ನು ನೀಡಿದರೆ ತನಿಖೆ ನಡೆಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.
ಪಾಲಡ್ಕ ಗ್ರಾ.ಪಂನಲ್ಲಿ ಸ್ಮಶಾನವಿಲ್ಲ. ಯಾರಾದರು ಮರಣ ಹೊಂದಿದರೆ ಹೆಣವನ್ನು ಸುಡಲು ಅಥವಾ ದಫನ ಮಾಡಲು ಜಾಗವಿಲ್ಲದಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದಾಗ ಪ್ರತಿಯೊಂದು ಗ್ರಾ.ಪಂ ವ್ಯಾಪ್ತಿಯಲ್ಲೂ ಸಾರ್ವಜನಿಕ ಸ್ಮಶಾನ ಹಾಗೂ ಘನ ತ್ಯಾಜ್ಯ ನಿರ್ವಹಣೆ ಘಟಕ ಇರಬೇಕು ಆದರೆ ಇದಕ್ಕೆ ಗುರುತಿಸುವ ಜಾಗವು ವಸತಿ ಪ್ರದೇಶದಿಂದ ದೂರವಿರಬೇಕು ಇದನ್ನು ಆದಷ್ಟು ಬೇಗನೇ ಗುರುತಿಸಬೇಕೆಂದು ತಹಶೀಲ್ದಾರ್ ಸೂಚಿಸಿದರು.
ಸ್ಮಶಾನಕ್ಕೆ ಜಾಗವನ್ನು ಗುರುತಿಸಲಾಗಿದೆ ಆದರೆ ವಸತಿ ಪ್ರದೇಶದಿಂದ ಸ್ವಲ್ಪವೇ ದೂರದಲ್ಲಿದೆ ಎಂದು ಪಿಡಿಓ ರಾಜೇಂದ್ರ ತಿಳಿಸಿದಾಗ ಬೇರೆ ಜಾಗ ನೋಡುವಂತೆ ತಹಶೀಲ್ದಾರ್ ಸೂಚಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಪಿಂಚಣಿಗಳ ಫಲಾನುಭವಿಗಳಿಗೆ ಆದೇಶ ಪತ್ರವನ್ನು ವಿತಿಸಲಾಯಿತು.
ತಾ.ಪಂ ಸದಸ್ಯ ರಮೇಶ್ ಪೂಜಾರಿ ಪಂಚಾಯತ್ ಸದಸ್ಯರಾದ ಸುಕೇಶ್ ಪೂಜಾರಿ, ಸತೀಶ್ ಕುಲಾಲ್, ಮೋಹನ ಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಉಪ ತಹಶೀಲ್ದಾರ್ ಅಬ್ದುಲ್ ರಹೀಮಾನ್ ಕಂದಾಯ ಅದಾಲತ್ ನ ಮಾಹಿತಿಯನ್ನು ನೀಡಿದರು. ಕಂದಾಯ ನಿರೀಕ್ಷಕ ಸೋಮಶೇಖರ ಮಯ್ಯ ಸ್ವಾಗತಿಸಿ ವಂದಿಸಿದರು.


