ಬಂಟ್ವಾಳ: ಮಕ್ಕಳಲ್ಲಿನ ವಿಶಿಷ್ಟ ಅನುಭವಗಳು ಕಾವ್ಯ ಕಟ್ಟುವಿಕೆಗೆ ಪ್ರೇರಣೆಯಾಗಬೇಕು, ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಕಾವ್ಯಪ್ರಜ್ಞೆ ಮೂಡಿಸುವಲ್ಲಿ ಕಾವ್ಯಕಮ್ಮಟಗಳು ಸಹಕಾರಿಯಾಗಲಿ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಹೇಳಿದರು.
ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ ಇದರ ಆಶ್ರಯದಲ್ಲಿ, ಸಂಸಾರ ಜೋಡುಮಾರ್ಗ ಸಂಯೋಜನೆಯಲ್ಲಿ..ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು , ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಂಚಯಗಿರಿ ಇವರ ಸಹಕಾರದೊಂದಿಗೆ ಬಿ.ಸಿ..ರೋಡಿನ ಸಂಚಯಗಿರಿ ರಾಣಿಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಬುಧವಾರ ಆರಂಭಗೊಂಡ ಬಂಟ್ವಾಳ ತಾಲೂಕು ಮಟ್ಟದ 2 ದಿನಗಳ ಮಕ್ಕಳ ಕಾವ್ಯ ಕಮ್ಮಟ ವನ್ನು ಉದ್ಘಾಟಿಸಿ ಮಾತನಾಡಿದರು.
ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದಲ್ಲಿ ಕಾವ್ಯಕಮ್ಮಟ ನಡೆಯುತ್ತಿರುಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಅವರು, ಮಕ್ಕಳು ಬಾಲ್ಯದಲ್ಲಿಯೇ ಸಾಹಿತ್ಯದತ್ತ ಒಲವು ತೋರಿದಲ್ಲಿ ಅದು ಅವರ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ ಎಂದರು. ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಯಾನಂದ ಪೆರಾಜೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಂಗಕರ್ಮಿ ಐಕೆ ಬೊಳುವಾರು, ಶಿಶುಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಪುಷ್ಪಲತಾ, ಜಿಲ್ಲಾ ಮಕ್ಕಳ ರಕ್ಷಣ ಘಟಕದ ಮಕ್ಕಳ ರಕ್ಷಣಾಧಿಕಾರಿ ಕುಮಾರ್ ವೇದಿಕೆಯಲ್ಲಿದ್ದರು. ಸಂಸಾರ ತಂಡದ ನಿರ್ದೇಶಕ ಮೌನೇಶ ವಿಶ್ವಕರ್ಮ ಸ್ವಾಗತಿಸಿ, ವಂದಿಸಿದರು. ಗೋಪಾಲ ಅಂಚನ್, ಸಂದೀಪ್ ಸಾಲ್ಯಾನ್, ಕಿಶೋರ್ ಪೆರಾಜೆ ಸಹಕರಿಸಿದರು.
ಬಳಿಕ ಮಕ್ಕಳ ಸಾಹಿತ್ಯ ಬೆಳೆದು ಬಂದ ದಾರಿ; ಮಕ್ಕಳ ಕವನದಲ್ಲಿನ ವೈವಿಧ್ಯತೆ ಬಗ್ಗೆ ಐಕೆ ಬೊಳುವಾರು, ಜನಪದ ಸಾಹಿತ್ಯ ಬೆಳೆದು ಬಂದ ದಾರಿ ಕುರಿತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಯಾನಂದ ಪೆರಾಜೆ ಶಿಬಿರದ ವಿದ್ಯಾರ್ಥಿ ಗಳಿಗೆ ಮಾಹಿತಿ ನೀಡಿದ.ಅಪರಾಹ್ನದ ಬಳಿಕ ಶಿಬಿರಾರ್ಥಿಗಳಿಂದ ಮಾದರಿ ಕವಿತೆಗಳ ರಚನೆಯ ಚಟುವಟಿಕೆಯನ್ನು ಶಿಕ್ಷಕ ಭಾಸ್ಕರ ಅಡ್ವಳ ನಿರ್ವಹಿಸಿದರು. ಸಂಜೆ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ನಿರ್ಧೆಶಕ ಪ್ರೊ.ತುಕಾರಾಮ ಪೂಜಾರಿಯವರ ಮಾರ್ಗದರ್ಶನದಲ್ಲಿ ಶಿಬಿರಾರ್ಥಿ ಮಕ್ಕಳು ಹಾಗೂ ಶಿಕ್ಷಕರು. ವಸ್ತುಸಂಗ್ರಹಾಲಯವನ್ನು ವೀಕ್ಷಿಸಿದರು.
