ಸುದ್ದಿ9 ಬಂಟ್ವಾಳ: ಸಜೀಪ ಮುನ್ನೂರು ಗ್ರಾಮದ ನಂದಾವರ ಹನುಮಾನ್ ದೇವಸ್ಥಾನದ ಸಮೀಪದ ನೇತ್ರಾವತಿ ನದಿ ಕಿನಾರೆಯಲ್ಲಿ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿ 11 ಬೋಟ್, ಒಂದು ಟಿಪ್ಪರ್ ಹಾಗೂ ಮರಳು ದಾಸ್ತಾನಿಗೆ ಕಂದಾಯ ಇಲಾಖೆ 1.62 ಲಕ್ಷ ರೂ. ದಂಡ ವಿಧಿಸಿದೆ.
ಹಳೆಯ ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ನೇತ್ರಾವತಿ ಸೇತುವೆ ಹಾಗೂ ಬಂಟ್ವಾಳ-ಪಾಣೆಮಂಗಳೂರು ನೇತ್ರಾವತಿ ನದಿ ಸೇತುವೆಯ ನಡುವಿನ ನದಿ ತೀರದದಲ್ಲಿ ನಡೆಸಲಾಗುತ್ತಿದ್ದ ಭಾರೀ ಪ್ರಮಾಣದ ಮರಳುಗಾರಿಕೆಯನ್ನು ಪತ್ತೆಹಚ್ಚಿದ ಸಹಾಯಕ ಆಯುಕ್ತ ಡಾ.ಅಶೋಕ್ ಅವರು ಸುಮಾರು 11.30 ರೂ. ಮೌಲ್ಯದ ಬೋಟ್‍ಗಳನ್ನು ವಶಪಡಿಸಿದ್ದರು.
ವಶಪಡಿಸಲಾದ 11 ಬೋಟ್‍ಗಳಿಗೆ ತಲಾ 11 ಸಾವಿರ ರೂ.ಗಳನ್ನು ದಂಡ ವಿಧಿಸಲಾಗಿದೆ. ಟಿಪ್ಪರ್‍ವೊಂದಕ್ಕೆ 5 ಸಾವಿರ ರೂ. ದಂಡ ಹಾಕಲಾಗಿದೆ. ಮರಳು ದಾಸ್ತಾನಿಗೆ 47ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಸಹಾಯಕ ಆಯುಕ್ತ ಡಾ. ಅಶೋಕ್ ತಿಳಿಸಿದ್ದಾರೆ. ರೈಲ್ವೇ ಹಾಗೂ ಹೆದ್ದಾರಿ ಸೇತುವೆಗಳ ಸುಮಾರು 250 ಮೀಟರ್ ಅಂತರದಲ್ಲಿ ಮರಳುಗಾರಿಕೆ ನಡೆಸಲಾಗುತ್ತಿದ್ದು, ಇದರಿಂದ ಸೇತುವೆಗಳಿಗೆ ದುಷ್ಟರಿಣಾಮ ಉಂಟಾಗುತ್ತಿದೆ ಎಂದು ತಹಸೀಲ್ದಾರ್ ಮಹಮ್ಮದ್ ಇಸಾಕ್ ತಿಳಿಸಿದ್ದಾರೆ.
ಪಾಣೆಮಂಗಳೂರು ಹನುಮಾನ್ ದೇವಸ್ಥಾನ ರಸ್ತೆಯ ವಠಾರದಲ್ಲಿ ನೇತ್ರಾವತಿ ನದಿಯಿಂದ ಮರಳು ತೆಗೆಯಲಾಗುತ್ತಿದ್ದು, ಬೆಂಗಳೂರು ಹಾಗೂ ಕೇರಳ ಪ್ರದೇಶಗಳಿಗೆ ಅವುಗಳನ್ನು ಸಾಗಿಸಲಾಗುತ್ತಿತ್ತು. ನದಿಗೆ ಯಂತ್ರಗಳನ್ನು ಅಳವಡಿಸಿ, ಮೇಲೆತ್ತಲಾದ ಮರಳನ್ನು ಬೋಟ್‍ಗಳಲ್ಲಿ ತುಂಬಿಸಿ ನದಿಯ ದಡದಲ್ಲಿ ದಾಸ್ತಾನು ಇರಿಸಲಾಗಿತ್ತು. ಮರುಳುಗಾರಿಕೆಯಿಂದ ಸಮೀಪದ ಕೃಷಿ ಭೂಮಿಗೂ ಹಾನಿ ಉಂಟಾಗಿದೆ ಎಂದು ಸ್ಥಳೀಯ ಕೃಷಿಕರು ಆರೋಪ ಮಾಡಿದ್ದಾರೆ. ಅಧಿಕಾರಿಗಳು ಮರಳು ದಾಸ್ತಾನಿಗೆ ದಂಡ ಹಾಕುವ ಸಂದರ್ಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ಮರಳನ್ನು ಏಲಂ ಮಾಡುವಂತೆ ಒತ್ತಾಯಿಸಿದರು. ಬಳಿಕ ಅವರನ್ನು ಸಮಾಧಾನಿಸಿ ವಿವಾದವನ್ನು ಅಧಿಕಾರಿಗಳು ಪೊಲೀಸ್ ಅಧಿಕಾರಿಗಳ ಮೂಲಕ ಬಗೆಹರಿಸಿದರು.
ಸೇತುವೆಯ ಆಸುಪಾಸು ಪ್ರದೇಶದಲ್ಲಿ ಮರುಳುಗಾರಿಕೆ ನಡೆಸಬಾರದು. ಮರುಳುಗಾರಿಕೆಗೆ ಯಾವುದೇ ಯಂತ್ರೋಪಕರಣ ಬಳಸಬಾರದೆಂದು ಉದ್ಧಿಮೆದಾರರರಿಗೆ ಸಹಾಯಕ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಕೃಷಿ ಪಂಪ್‍ಗೆ ಅಳವಡಿಸಲಾದ ವಿದ್ಯುತ್ ಸಂಪರ್ಕವನ್ನು ಮರಳುಗಾರಿಕೆಯ ನೌಕರರ ಡೇರೆಗಳಿಗೆ ಕಲ್ಪಿಸಲಾಗಿದೆ. ಡೇರೆಗಳನ್ನು ತೆರವುಗೊಳಿಸಿದ ಅಧಿಕಾರಿಗಳು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಅಲ್ಲದೇ ವಿದ್ಯುತ್ ಮೀಟರ್ ಅಳವಡಿಸಿದ ಕುರಿತು ತಕ್ಷಣ ಕ್ರಮ ಕೈಗೊಳ್ಳುವುದಾಗಿ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ತಹಸೀಲ್ದಾರ್ ಮಹಮ್ಮದ್ ಇಸಾಕ್, ಗಣಿ ಮತ್ತು ಭೂವಿಜ್ಞಾನ ಇಲಾಖಾ ಅಧಿಕಾರಿಗಳಾದ ಮೂರ್ತಿ ಬಿ.ಕೆ, ನಾಗೇಂದ್ರ, ಉಪತಹಸೀಲ್ದಾರ್ ರೋಹಿನಾಥ್, ರೆವಿನ್ಯೂ ಇನ್ಸ್‍ಪೆಕ್ಟರ್ ನಾರಾಯಣ ಪೂಜಾರಿ, ಗ್ರಾಮ ಲೆಕ್ಕಾಧಿಕಾರಿಗಳಾದ ತೌಫೀಕ್, ಪ್ರದೀಪ್, ಎ.ಪಿ. ಭಟ್, ನವೀನ್, ಸಿಬ್ಬಂದಿಗಳಾದ ಸದಾಶಿವ, ಲಕ್ಷ್ಮಣ, ನವೀನ್, ಪುರುಷೋತ್ತಮ, ಮೋಹನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

