ಮೂಡುಬಿದರೆ: ಮಂಗಳೂರು-ಮೂಡುಬಿದರೆ ರಾಷ್ಟ್ರೀಯ ಹೆದ್ದಾರಿಯ ಮಿಜಾರಿನಲ್ಲಿ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರವನ್ನು ಹೊತ್ತ ಲಾರಿಯು ಭಾನುವಾರ ಮಧ್ಯಾಹ್ನ ಬೈಕ್‍ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಮೃತಪಟ್ಟಿದ್ದಾರೆ.

ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಬಳಿ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಭಾನುವಾರ ಮಧ್ಯಾಹ್ನವಾಗಿ ಬೈಕ್ ಸವಾರ ಎಡಪದವು ಗ್ರಾಮದ ಒಡ್ಡೂರು ನಿವಾಸಿ ಉದಯ ನಾಯಕ್ (40) ಸ್ಥಳದಲ್ಲೇ ಮೃತಪಟ್ಟಿದ್ದು ಸಹಸವಾರ ಕೇಶವ ನಾಯಕ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಿಬ್ಬರು ಬೈಕಿನಲ್ಲಿ ಪೂಜೆಯ ಆಮಂತ್ರಣ ಪತ್ರವನ್ನು ವೇಣೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ನೀಡಲು ಹೋಗುತ್ತಿದ್ದಾಗ ಮೂಡುಬಿದಿರೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಲಾರಿಯು ಮತ್ತೊಂದು ವಾಹನವನ್ನು ಓವರ್‍ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ಬೈಕಿಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಮೃತ ಉದಯ ನಾಯಕ್ ಅವರ ಎರಡೂ ಕೈಗಳು ತುಂಡಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇವರು ಬೈಕಂಪಾಡಿಯ ಕ್ಯಾಂಡಲ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು ಪತ್ನಿ ಮತ್ತು ಮೂರು ತಿಂಗಳ ಗಂಡುಮಗು ಹಾಗೂ ಆರುವರ್ಷದ ಹೆಣ್ಣುಮಗುವಿದೆ. ಮೂಡುಬಿದರೆ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ತನಿಖೆ ನಡೆಸಿದ್ದು ಪ್ರಕರಣ ದಾಖಲಿಸಿದ್ದಾರೆ.
