ಬಂಟ್ವಾಳ:ತಾಲ್ಲೂಕಿನ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಪಾಣೆಮಂಗಳೂರು-ಸಣ್ಣಕುಕ್ಕು ನಡುವೆ ಕಳೆದ ಐದು ವರ್ಷಗಳ ಹಿಂದೆ ರೂ 2.82ಕೋಟಿ ವೆಚ್ಚದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಾಣಗೊಂಡ ರಸ್ತೆ ಕಳೆದ ಎರಡು ವರ್ಷಗಳಿಂದ ನಿರ್ವಹಣೆಯಿಲ್ಲದೆ ಸಂಪೂರ್ಣ ಹೊಂಡಮಯವಾಗಿದೆ ಎಂದು ಆರೋಪಿಸಿ ಗುತ್ತಿಗೆದಾರರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುರತ್ಕಲ್ ನಿವಾಸಿ ನವೀನ ಕುಮಾರ್ ಎಂಬವರು ಕಳೆದ 2009ನೇ ಮಾ.6ರಂದು ರಸ್ತೆ ವಿಸ್ತರಣೆ ಮತ್ತು ಡಾಂಬರೀಕರಣ ಕಾಮಗಾರಿ ಆರಂಭಿಸಿ ಬಳಿಕ 2010ನೇ ನ.30ರಂದು ಪೂರ್ಣಗೊಳಿಸಿದ್ದರು. ಸರ್ಕಾರಿ ಗುತ್ತಿಗೆ ಕರಾರಿನಂತೆ ಈ ರಸ್ತೆಯನ್ನು ಐದು ವರ್ಷಗಳ ತನಕ ಆಯಾಯ ಗುತ್ತಿಗೆದಾರರನೇ ಕಡ್ಡಾಯವಾಗಿ ನಿರ್ವಹಣೆ ಮಾಡಬೇಕಿದೆ.
ಇವರು ಕೇವಲ ಮೂರು ವರ್ಷಗಳ ತನಕ ಮಾತ್ರ ಕಳಪೆ ತೇಪೆ ಕಾಮಗಾರಿ ನಡೆಸಿ ನಿರ್ವಹಣಾ ಬಿಲ್ಲು ಪಡೆದುಕೊಂಡು ಕಳೆದ ಎರಡು ವರ್ಷಗಳಿಂದ ಸ್ಥಳೀಯರು ಜನಪ್ರತಿನಿಧಿಗಳ ಮೂಲಕ ಒತ್ತಡ ತಂದರೂ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ನರಿಕೊಂಬು ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷ ಆನಂದ ಸಾಲ್ಯಾನ್ ಆರೋಪಿಸಿದ್ದಾರೆ.
ಈ ಬಗ್ಗೆ ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿಯೂ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಗುತ್ತಿಗೆದಾರರ ಹೆಸರನ್ನು ‘ಕಪ್ಪು ಪಟ್ಟಿ’ಗೆ ಸೇರಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರಿಂದಾಗಿ ಮಂಗಳೂರು ಯೋಜನಾ ವಿಭಾಗದ ಕಾರ್ಯ ನಿರ್ವಹಣಾ ಎಂಜಿನಿಯರ್ ರಾಜೇಂದ್ರ, ಸಹಾಯಕ ಕಾರ್ಯ ನಿರ್ವಹಣಾ ಎಂಜಿನಿಯರ್ ಜಯಾನಂದ ಪೂಜಾರಿ, ಕಿರಿಯ ಎಂಜಿನಿಯರ್ ಸೂರ್ಯನಾರಾಯಣ ಮತ್ತಿತರರು ಇತ್ತೀಚೆಗೆ ಧಾವಿಸಿ ರಸ್ತೆ ಪರಿಶೀಲನೆ ನಡೆಸಿದ್ದಾರೆ. ಅಂತಿಮವಾಗಿ ಗುತ್ತಿಗೆ ಕರಾರು ರದ್ದುಪಡಿಸಿ ಪ್ರತ್ಯೇಕ ಟೆಂಡರ್ ಕರೆದು ರಸ್ತೆ ನಿರ್ವಹಣೆ ನಡೆಸುವ ಭರವಸೆ ದೊರೆತಿದೆ ಎಂದು ಕೆಡಿಪಿ ಸದಸ್ಯ ಉಮೇಶ ಬೋಳಂತೂರು ತಿಳಿಸಿದ್ದಾರೆ.
