ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಗ್ರಾಮದ ಬಡಾಜೆಗುತ್ತು ಎಂಬಲ್ಲಿ ಫೆ.4ರಿಂದ 10ರತನಕ ನಡೆಯಲಿರುವ ಅಷ್ಟಪವಿತ್ರ ನಾಗಮಂಡಲೋತ್ಸವ ಮತ್ತು ಧರ್ಮ ನೇಮೋತ್ಸವ’ ಕಾರ್ಯಕ್ರಮ ಪ್ರಯುಕ್ತ ಭಾನುವಾರ ಚಪ್ಪರ ಮುಹೂರ್ತ ನೆರವೇರಿಸಲಾಯಿತು. ಸಮಿತಿ ಅಧ್ಯಕ್ಷ ಎ.ರವಿಶಂಕರ ಶೆಟ್ಟಿ ಬಡಾಜೆಗುತ್ತು, ಪ್ರಮುಖರಾದ ಮಂಜುನಾಥ ಭಂಡಾರಿ ಶೆಡ್ಡೆ, ನರಸಿಂಹ ಹೊಳ್ಳ, ಚಂದ್ರಹಾಸ ಶೆಟ್ಟಿ ರಂಗೋಲಿ, ಭುವನೇಶ ಪಚ್ಚಿನಡ್ಕ, ಬಿ.ಉಮೇಶ ಶೆಟ್ಟಿ, ರಾಕೇಶ ಮಲ್ಲಿ, ರಾಜಶೇಖರ ರೈ, ಅಶ್ವನಿ ಕುಮಾರ್ ರೈ, ಸತೀಶ ಭಂಡಾರಿ, ಮಹಾಬಲ ಆಳ್ವ, ಜಯರಾಮ ಸಾಮಾನಿ, ಪ್ರವೀಣ ಜಕ್ರಿಬೆಟ್ಟು ಮತ್ತಿತರರು ಇದ್ದರು.
ಬಂಟ್ವಾಳ:ತಾಲ್ಲೂಕಿನ ಅಮ್ಟಾಡಿ ಗ್ರಾಮದ ಬಡಾಜೆಗುತ್ತು ಎಂಬಲ್ಲಿ ಫೆ.4ರಿಂದ 10ರತನಕ ‘ಅಷ್ಟಪವಿತ್ರ ನಾಗಮಂಡಲೋತ್ಸವ ಮತ್ತು ಧರ್ಮ ನೇಮೋತ್ಸವ’ ಕಾರ್ಯಕ್ರಮ ಸಂಭ್ರಮ ಸಡಗರದಿಂದ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಎ.ರವಿಶಂಕರ ಶೆಟ್ಟಿ ಬಡಾಜೆಗುತ್ತು ಇವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಫೆ.4ರಂದು ಬೆಳಿಗ್ಗೆ ಸಮೀಪದ ಅಜೆಕ್ಕಳ ಎಂಬಲ್ಲಿ ನಡೆಯುವ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ಮತ್ತಿತರ ಕಾರ್ಯಕ್ರಮಗಳಿಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಚಾಲನೆ ನೀಡುವರು.
ಫೆ.6ರಂದು ಮಧ್ಯಾಹ್ನ ಯಕ್ಷಗಾನ ಬಯಲಾಟ ಹಾಗೂ ಸಂಜೆ ಧಾರ್ಮಿಕ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಇಂದನ ಸಚಿವ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು, ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಆರೋಗ್ಯ ಸಚಿವ ಯು.ಟಿ.ಖಾದರ್ ಮತ್ತಿತರ ಗಣ್ಯರು ಭಾಗವಹಿಸುವರು.
ಅಂದು ರಾತ್ರಿ ನಾಗಬನದಲ್ಲಿ ಹಾಲಿಟ್ಟು ಸೇವೆ ನಡೆದ ಬಳಿಕ ‘ಅಷ್ಟಪವಿತ್ರ ನಾಗಮಂಡಲೋತ್ಸವ’ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಫೆ.8ರಿಂದ 10ರತನಕ ಕ್ಷೇತ್ರದ ಧರ್ಮಚಾವಡಿ ದೈವಗಳಿಗೆ ‘ಧರ್ಮ ನೇಮೋತ್ಸವ’ ಕಾರ್ಯಕ್ರಮ ನಡೆಯಲಿದೆ ಎಂದು ಅವರು ವಿವರಿಸಿದರು.
ಭಕ್ತರಿಗೆ ಪ್ರತಿದಿನ ಅನ್ನಸಂತರ್ಪಣೆ ಮತ್ತು ಉಚಿತ ಬಸ್ ಸೌಲಭ್ಯ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ನರಸಿಂಹ ಹೊಳ್ಳ, ಚಂದ್ರಹಾಸ ಶೆಟ್ಟಿ ರಂಗೋಲಿ, ಭುವನೇಶ ಪಚ್ಚಿನಡ್ಕ, ಬಿ.ಉಮೇಶ ಶೆಟ್ಟಿ, ರಾಕೇಶ ಮಲ್ಲಿ ಮತ್ತಿತರರು ಇದ್ದರು


