ಸುದ್ದಿ9 ಮೂಡುಬಿದಿರೆ: ಕಲ್ಲಮುಂಡ್ಕೂರು ಸರ್ವೋದಯ ಶಾಲೆಯ ಬಳಿ ಸೋಮವಾರ ಮಧ್ಯಾಹ್ನ ಕಾಣಿಸಿಕೊಂಡ ಬೆಂಕಿ ಮಂಗಳವಾರದವರೆಗೂ ಮುಂದುವರಿದಿದ್ದು, ಅಗ್ನಿ ಶಾಮಕದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.
ಕಲ್ಲಮುಂಡ್ಕೂರಿನ ಸರ್ವೋದಯ ಪ್ರೌಢಶಾಲೆಯ ಹಿಂಬದಿ ಅರಣ್ಯ ಇಲಾಖೆಗೆ ಸೇರಿದ ಸಾಮಾಜಿಕ ಅರಣ್ಯದಲ್ಲಿ ಸೋಮವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಮೂಡುಬಿದಿರೆ ಅಗ್ನಿಶಾಮಕದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ, ಹೋಗಿದ್ದರು. ಸೋಮವಾರ ರಾತ್ರಿ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕದಳದವರು ಮತ್ತೊಮ್ಮೆ ಬೆಂಕಿ ನಂದಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕದಳ, ಸ್ಥಳೀಯರು ಹಾಗೂ ಶಾಲಾ ವಿದ್ಯಾರ್ಥಿಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಕಾಡಿನಲ್ಲಿ ಅಗ್ನಿಶಾಮಕದಳ ವಾಹನ ಹೋಗಲು ಅವಕಾಶವಿಲ್ಲದ ಕಾರಣ ರಸ್ತೆ ಬದಿಯಲ್ಲಿ ನಿಲ್ಲಿಸುವ ಪರಿಸ್ಥಿತಿಯಿದ್ದು, ಕಾಡಿನ ಮಧ್ಯಯಲ್ಲಿ ಕಾಣಿಸಿಕೊಂಡಿರುವ ಬೆಂಕಿ ನಂದಿಸುವುದು ಕಷ್ಟ ಸಾಧ್ಯವಾಗಿದೆ.
ಶಾರ್ಟ್ ಸಕ್ಯೂರ್ಟ್ ಕಾರಣದಿಂದ ಬೆಂಕಿ ಕಾಣಿಸಿಕೊಂಡಿರಬಹುದೆಂದು ಶಂಕಿಸಲಾಗಿದೆ.














