ಸುದ್ದಿ9 ಮೂಡಬಿದಿರೆ: ವಾರೆ ವ್ಹಾ!! ಕ್ಯಾ ಕಮಾಲ್ ಕರ್ ದಿಯಾ? ಎನ್ನುವಂತೆ ಕೂತಿದ್ದ ಜನಸ್ತೋಮ ನಿಬ್ಬೆರಗಾಗಿ ಕಿರುಚುವಂತೆ ಮಾಡಿದ `ಮಹಾಲೀಲ’ ತನ್ನ ಲೀಲೆ ಮೆರೆದ ಕಾಲವದು. ವಿರಾಸತ್ನ ಆಶಯಕ್ಕೆ ಆಸರೆಯೇನೋ ಎಂಬಂತೆ ಶ್ರೋತೃಗಳ ಮಧ್ಯೆ ನಾದವೇ ಭುಗಿಲೆದ್ದು ಹಾರಿದ ರಸಾಸ್ವಾದವದು. ಸಂಗೀತ ವಾದ್ಯಗಳೇ ಚೋದ್ಯವೆನಿಸಿ ಪ್ರೇಕ್ಷಕರ ರಸದ ಅಪ್ಪುಗೆಗೆ ಸಾಕ್ಷೀಭೂತವಾಗಿ, ಸಾವಿರ ಕರಗಳ ಚಪ್ಪಾಳೆಯೇ ಸಂಗೀತವಾಗಿ ಹೊರಹೊಮ್ಮುವಂತೆ ಮಾಡಿದ `ಮಹಾಲೀಲ’ ಕಾರ್ಯಕ್ರಮ ಸಾಂಸ್ಕೃತಿಕ ರಾತ್ರಿಗೊಂದು ಮಧುವನ ನಿರ್ಮಿಸಿದಂತಿತ್ತು.
ಆಳ್ವಾಸ್ ವಿದ್ಯಾಗಿರಿಯ ಪ್ಯಾಲೇಸ್ಗ್ರೌಂಡ್ನಲ್ಲಿ ನಡೆದ ಎರಡನೇ ದಿನದ ವಿರಾಸತ್ನ ಸಾಂಸ್ಕೃತಿಕ ಸಂಜೆಯಲ್ಲಿ ‘ಸಂಗೀತ’ ವಿಜಯ ಗದ್ದುಗಹೆಯೇರಿದ ರಸಸಂಜೆಯದು. ಕಲೈಮಾಮಣಿ ಶಿವಮಣಿಯವರ ಕೈಕಮಾಲ್ಗೆ ವಯೋಲಿನ್ನಲ್ಲಿ ಸಾಥ್ ನೀಡಿದ ಬಾ¯ಭಾಸ್ಕರ, ಕೀಬೋರ್ಡ್ ಸ್ಟೀವನ್ ಡೇವಸ್ಸಿ ಮನೋರಂಜನೆಯ ಸ್ಪರ್ಧೆಗಿಳಿದದ್ದು ಪ್ರೇಕ್ಷಕರನ್ನೇ ಸೆಳೆಯುವಂತಿತ್ತು. ಏಕಕಾಲದಲ್ಲಿ ಹಲವು ಸಂಗೀತ ಪರಿಕರಗಳನ್ನು ವಿವಿಧ ಬಗೆಯಲ್ಲಿ ನುಡಿಸಬಲ್ಲ ಶಿವಮಣಿಯವರ ಅನುಭವದ ಹಾದಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಕಾರ್ಯಕ್ರಮದುದ್ದಕ್ಕೂ ಸಾಂಪ್ರದಾಯಿಕ ಹಾಡುಗಳಿಗೆ ನವೀನತೆಯನ್ನು ನೀಡ ಹೊರಟ ಈ ತ್ರಿಮೂರ್ತಿಗಳ ಕೈ ಚಳಕಕ್ಕೆ ರಘುಪತಿ ರಾಘವ, ಜೈ ಹೋ, ಛೋಟೀ ಸೀ ಆಶಾ, ಮಹಾ ಗಣಪತಿ ಮನಸಾ ಸ್ಮರಾಮೀ ಮೊದಲಾದ ಹಾಡುಗಳು ವಿವಿಧ ರೂಪ ತಳೆದಿದ್ದು ಸಂಗೀತದ ಶ್ರೀಮಂತಿಕೆಯನ್ನು ಬಿಂಬಿಸಿತು.
ಅನುಭವಿಸಿ ನುಡಿಸುವ ಮರ್ಮದ ಮುಂದೆ ಸ್ಟೀಫನ್ ಡೇವಸ್ಸಿಯವರ ಕೀಬೋರ್ಡ್ ಕೈಚಳಕ ಸಂಗೀತದ ಸಿರಿಯನ್ನು ಇಮ್ಮಡಿಗೊಳಿಸಿತು. ನೋಡುಗನನ್ನೇ ತಬ್ಬಿಬ್ಬುಗೊಳಿಸುವಂತಹ ಪ್ರೇಕ್ಷಕರ ದನಿಯೊಂದಿಗೆ ಆಡಬಲ್ಲಂತಹ ಇವರ ಸಂಗೀತ ಪರಿಕರದ ಕೈಚಳಕ ವಿರಾಸತ್ನ ಐಸಿರಿಗೆ ನಿದರ್ಶನವಾಯಿತು. ನುಡಿಸುವಿಕೆಯಲ್ಲಿ ಪಾಶ್ಚಾತ್ಯತನವಿದ್ದರೂ ಓಂಕಾರದ ನಾದ, ಗೆಜ್ಜೆಯ ನಿನಾದ , ಘಂಟಾನಾದದ ಸದ್ದು ಸಾಂಪ್ರದಾಯಿಕತೆಯನ್ನು ಬಿಂಬಿಸಿತು. ಒಂದೇ ತಾಳದಲ್ಲಿ ಆಡುವಂತಹ, ತಾಳಗಳನ್ನೇ ಎಳೆದು ಬಿಡುವಂತಹ ಮೋಡಿ ಸವಾಲಿನಲ್ಲಿ ಮನೋರಂಜನೆಯನ್ನು ಸೃಷ್ಟಿಸಿತು. ಏರುಗತಿಯಿಂದ ಇಳಿಗತಿಗೆ ಹೋಗಿ ಗತಿಗಳ ನಡುವೆ ಚೆಲ್ಲಾಟ ಆಡುವ ರೀತಿ ಒಂದು ಸಂಗೀತೋಪಕರಣದಿಂದ ಇನ್ನೊಂದು ಉಪಕರಣದ ನುಡಿಸುವಿಕೆಯತ್ತ ಧಾವಿಸುವ ರೀತಿ, ಅದೇ ಗತಿ, ಲಯ, ದನಿಯನ್ನು ಕಾಯ್ದಿರಿಸುವ ಸೃಜನಶೀಲತೆ ಪರಿಶ್ರಮದ ಪಕ್ವತೆಯನ್ನು ಹೊರಹೊಮ್ಮಿಸುವಂತಿತ್ತು.
ಕಾರ್ಯಕ್ರಮದುದ್ದಕ್ಕೂ ಪ್ರೇಕ್ಷಕರನ್ನೇ ಕೇಂದ್ರವಾಗಿರಿಸಿ ಮೂಡಿದ `ಮಹಾಲೀಲ’ ವಿದ್ಯಾಗಿರಿಗೊಂದು ಮಹಾಗಿರಿಯನ್ನು ಸೃಜಿಸಿತು. ಕಲಾವಿದರ ನೈಪುಣ್ಯತೆ ಸೋಜಿಗದೊಂದಿಗೆ ಉತ್ತಮತೆಯನ್ನು ಕಾಯ್ದಿರಿಸುವ ಕಾರ್ಯಕ್ರಮದ ಮರ್ಮ ಎಲ್ಲರನ್ನೂ ಸಾಕ್ಷಿಯನ್ನಾಗಿಸಿತು. ನಿರ್ಜೀವ ವಸ್ತುಗಳಲ್ಲಿ ಜೀವ ಕಾಣಿಸಿದ ಕಲಾವಿದರ ಕೈಚಳಕ ಪ್ರೇಕ್ಷಕರನ್ನು ಪುಳಕರನ್ನಾಗಿಸಿ ವಿರಾಸತ್ನ ಪಕ್ವತೆಗೆ ಸಾಕ್ಷಿಯಾಯಿತು. ಕಾರ್ಯಕ್ರಮದ ನಂತರ ಜನ ಕಲಾವಿದರ ಸುತ್ತ ಮುಗಿ ಬಿದ್ದು ತಮ್ಮ ಹರ್ಷ ವ್ಯಕ್ತಪಡಿಸಿದ ರೀತಿ ಕಾರ್ಯಕ್ರಮದ ಸಫಲತೆಗೆ ಹಿಡಿದ ಕೈಗನ್ನಡಿಯಂತಿತ್ತು.
ಬಾಕ್ಸ್
ಪ್ರೇಕ್ಷಕರೊಡನೆಯೊಂದಾದ ಬಾಲಭಾಸ್ಕರ
ಹೆಸರಿಗೆ ತಕ್ಕಂತೆ ಬಾಲನಾದ ಭಾಸ್ಕರ ಪ್ರೇಕ್ಷಕರ ನಡುವೆ ಹೊಕ್ಕು ಸಂಗೀತ ರಸಾಸ್ವಾದ ಹರಿಯುವಂತೆ ಮಾಡಿದ ಆತನ ಕಾರ್ಯಕ್ರಮ ರೀತಿ ನೆರೆದ ಜನಸ್ತೋಮದಲ್ಲಿ ಹೊಸ ಸಂಚಲನ ಮೂಡಿಸಿತು. ವಿರಾಸತ್ ವೇದಿಕೆಯ ಮುಂಭಾಗ ಪೂರ್ತಿ ಕ್ರಮಿಸಿದ ಬಾಲಭಾಸ್ಕರನೊಂದಿಗೆ ಸೆಲ್ಫೀಗಳನ್ನು ತೆಗೆದು ಅನೇಕರು ತಮ್ಮ ಹರ್ಷ ವ್ಯಕ್ತಪಡಿಸಿದರು.




