ಪದಗಳ ಮೂಲಕ ರೂಪುಗೊಂಡದ್ದು ಜನಪದ ಸಂಸ್ಕøತಿ
ಸುದ್ದಿ9 ಮೂಡುಬಿದರೆ: ಪ್ರಾಣಿಗಳ ರೀತಿ ಬದುಕುತ್ತಿದ್ದ ಮನುಷ್ಯ ಪದಗಳ ಮೂಲಕ ಸಂಸ್ಕ್ರತಿ ಹುಟ್ಟು ಹಾಕಿದ. ತಾನು ನಂಬಿಕೊಂಡು ಬಂದ ಅನಾಗರಿಕತೆಯಿಂದ ಹೊರಬರಲು ಕೆಲವು ಸಂಸ್ಕ್ರತಿ ಮತ್ತು ಕಟ್ಟುಪಾಡುಗಳನ್ನು ರೂಪಿಸಿಕೊಂಡರು. ಅದುವೇ ಆದರ್ಶದ ಪ್ರತೀಕಗಳಾಗಿ ಬೆಳೆದುಬಂದವು ಎಂದು ಜಾನಪದ ವಿಧ್ವಾಂಸ ಡಾ.ಪಿ.ಕೆ.ರಾಜಶೇಖರ್ ಹೇಳಿದರು.
ಮೂಡುಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ವಿದ್ಯಾಗಿರಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ತಿಂಗಳ ಚಿಂತನ ಕಾರ್ಯಕ್ರಮದಲ್ಲಿ `ಜಾನಪದ ಮಹಾಕಾವ್ಯ ಪ್ರತಿಪಾಧಿಸಿದ ಜೀವನಾದರ್ಶಗಳು’ ಕುರಿತು ಉಪನ್ಯಾಸ ನೀಡಿದರು.
ಜೀವನಮೌಲ್ಯ, ಅವುಗಳು ಪತನವಾಗುವ ರೀತಿಯನ್ನು ಜನಪದರು ಹಾಡುಗಳ ಮೂಲಕ ತಿಳಿಸಿ, ಜನರು ವಿದ್ಯಾವಂತರಾಗಿಸಿದ್ದಾರೆ.
ಆಸೆ ಮಾನವನ ಜೀವಂತಿಕೆಯ ಸಂಕೇತ. ಆದರೆ ದುರಾಸೆಯಿರಬಾರದು. ಹಂಚಿಕೆಯ ವಿಕೇಂದ್ರ ಆಗಬೇಕು. ದಾನ ಪ್ರದರ್ಶನ ಆಗಬಾರದು ಎನ್ನುವುದನ್ನು ಜನಪದರು ಅರ್ಥಪೂರ್ಣ ಪದಗಳ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದರು.
ಹಿಂದೆ ರೂಪಿಸಿದ ಕೆರೆಗೆ ಹಾರ, ಸತಿಸಹಗಮನ ಪದ್ಧತಿಯಂತಹ ಕಟ್ಟುಪಾಡುಗಳನ್ನು ವಿವರಿಸಿದರು. ಜನಪದದ ಮಹತ್ವ ಸಾರುವ ಜನಪದ ಹಾಡುಗಳನ್ನು ಸಹಹಾಡುಗಾರರೊಂದಿಗೆ ಹಾಡಿ ರಂಜಿಸಿದರು. ಸಹಹಾಡುಗಾರರಾಗಿ ಆಕಾಶವಾಣಿ ಕಲಾವಿದ ಡಾ.ಮೈಸೂರು ಉಮೇಶ್, ಉಪನ್ಯಾಸಕರಾದ ಬಸವರಾಜ್, ಶಂಭುಲಿಂಗ ಶೆಟ್ಟಿ ಸಹಕರಿಸಿದರು.
ಆಳ್ವಾಸ್ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಡಾ.ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.


