ಸುದ್ದಿ9ಬಂಟ್ವಾಳ:ರಾಜ್ಯದೆಲ್ಲೆಡೆ ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಹೈಕೋರ್ಟ್ಗೆ ಸಲ್ಲಿಸಲಾಗಿರುವ ಸಾರ್ವಜನಿಕ ರಿಟ್ ಅರ್ಜಿ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿದ ಸುತ್ತೋಲೆಯಂತೆ ತಾಲ್ಲೂಕಿನಲ್ಲಿ ಡಿ.ಸಿ.ಮನ್ನಾ ಜಮೀನು ಸೇರಿದಂತೆ ಈಗಾಗಲೇ ಒಟ್ಟು 635 ಮಂದಿಗೆ ಕಂದಾಯ ಇಲಾಖೆ ನೋಟೀಸು ರವಾನಿಸಿದ್ದು, ಇದು ರೈತರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ.
ತಾಲ್ಲೂಕಿನ ಒಟ್ಟು 84 ಗ್ರಾಮಗಳಲ್ಲಿ ಸುಮಾರು 14,029 ಎಕರೆ ಜಮೀನು ಒತ್ತುವರಿಯಾಗಿದೆ ಎಂದು ಅಂದಾಜಿಸಲಾಗಿದ್ದು, ಇದಕ್ಕಾಗಿ ಒಟ್ಟು 5,241 ಮಂದಿ ಪೈಕಿ ಪ್ರಥಮ ಹಂತವಾಗಿ 552 ಮಂದಿಗೆ ನೋಟೀಸು ರವಾನಿಸಲಾಗಿದೆ. ಈ ಪೈಕಿರಿಂದ ಮೂರು ಎಕರೆ ಒಳಗೆ ಒಟ್ಟು 3,958 ಮಂದಿ, 3ರಿಂದ 5ರೊಳಗೆ ಒಟ್ಟು 938 ಮಂದಿ, 5ರಿಂದ 10 ಎಕರೆ ಒಳಗೆ ಒಟ್ಟು 345 ಮಂದಿ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪೈಕಿ ಬಹುತೇಕ ಜಮೀನು ಸರ್ಕಾರದ ಅಕ್ರಮ-ಸಕ್ರಮ ಯೋಜನೆಯಡಿ ರೈತರ ಕುಮ್ಕಿ ಕೃಷಿ ಜಮೀನು ಆಗಿರುವ ಹಿನ್ನೆಲೆಯಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ.
ಇನ್ನೊಂದೆಡೆ ತಾಲ್ಲೂಕಿನಲ್ಲಿ ಕಾದಿರಿಸಿದ ಡಿ.ಸಿ.ಮನ್ನಾ ಜಮೀನು ಕೂಡಾ ಒತ್ತುವರಿಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಟ್ಟು 83 ಮಂದಿಗೆ ಸೂಚನಾ ಪತ್ರ ರವಾನಿಸಲಾಗಿದೆ. ಈ ಪೈಕಿ ತಾಲ್ಲೂಕಿನ 10 ಗ್ರಾಮಗಳಲ್ಲಿ ಸ್ವತಃ ಅರಣ್ಯ ಇಲಾಖೆಯೇ ಜಮೀನು ಒತ್ತುವರಿ ಮಾಡಿದ ಪ್ರಸಂಗವೂ ಬೆಳಕಿಗೆ ಬಂದಿದ್ದು, ಅರಣ್ಯ ಇಲಾಖೆಗೆ ಕೂಡಾ ಪ್ರತ್ಯೇಕ ಸೂಚನಾ ಪತ್ರ ರವಾನಿಸಲಾಗಿದೆ.
ತಾಲ್ಲೂಕಿನ ಮಣಿನಾಲ್ಕೂರು, ತೆಂಕಕಜೆಕಾರು, ಪಂಜಿಕಲ್ಲು, ಕೊಯಿಲ, ಬುಡೋಳಿ, ಅಜ್ಜಿಬೆಟ್ಟು, ಕುಕ್ಕಿಪಾಡಿ, ವಿಟ್ಲಪಡ್ನೂರು, ಬೋಳಂತೂರು, ಪುಣಚ ಗ್ರಾಮಗಳಲ್ಲಿ ಅರಣ್ಯ ಇಲಾಖೆಯು ಡಿ.ಸಿ.ಮನ್ನಾ ಜಮೀನು ಒತ್ತುವರಿ ಮಾಡಿದೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣ ಭೂಕಂದಾಯ ಕಾಯ್ದೆ ಕಲಂ 1964ರ ಕಲಂ 192(ಎ)ರಂತೆ ಶಿಕ್ಷಾರ್ಹ ಅಪರಾಧವಾಗಿದೆ. ಇದರಿಂದಾಗಿ ಈ ನೋಟೀಸು ತಲುಪಿ ಏಳು ದಿನಗಳೊಳಗೆ ಸೂಕ್ತ ದಾಖಲೆಪತ್ರ ಸಹಿತ ಲಿಖಿತ ಹೇಳಿಕೆ ನೀಡಬೇಕು. ಇದಕ್ಕೆ ತಪ್ಪಿದಲ್ಲಿ ಸದ್ರಿ ಅತಿಕ್ರಮಣವನ್ನು ಇಲಾಖೆಯಿಂದಲೇ ತೆರವುಗೊಳಿಸಿ, ಇದಕ್ಕೆ ತಗಲುವ ವೆಚ್ಚವನ್ನು ಭೂಕಂದಯಾ ಬಾಕಿಯಂತೆ ವಸೂಲು ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ ಎಂದು ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
