ಅಮೃತಸರ: ಆರ್ ಎಸ್ ಎಸ್ ತನ್ನ ಘರ್ ವಾಪಸಿ ಕಾರ್ಯಕ್ರಮವನ್ನು ಮತ್ತೆ ಮುಂದುವರಿಸಿದೆ. ಈಗ ಎನ್ಡಿಎ ಅಂಗಪಕ್ಷವಾಗಿರುವ ಶಿರೋಮಣಿ ಅಕಾಲಿ ದಳ ಆಡಳಿತದಲ್ಲಿರುವ ಪಂಜಾಬ್ನಲ್ಲಿ ಮರುಮತಾಂತರ ನಡೆದಿದೆ.
ಅಮೃತಸರದ ಗುರು-ಕಿ-ವಡಾಯಿಯಲ್ಲಿರುವ ಜೀವನ್ ಸಿಂಗ್ ಗುರುದ್ವಾರಾದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸುಮಾರು 40 ಕ್ರೈಸ್ತ ಕುಟುಂಬಗಳನ್ನು ಪುನಃ ಸಿಖ್ ಧರ್ಮಕ್ಕೆ ಮತಾಂತರಿಸಿದೆ.
ಮತಾಂತರ ಪ್ರಕ್ರಿಯೆ ಮುಗಿದ ನಂತರ ಆರ್ಎಸ್ಎಸ್ ಕಾರ್ಯಕರ್ತನೋರ್ವ ‘ಜೋ ಬೋಲೆ ಸೋ ನಿಹಾಲ್’ ಎಂದು ಕೂಗಿದಾಗ ಮತಾಂತರ ಹೊಂದಿದ ಕುಟುಂಬಗಳು ದನಿಗೂಡಿಸಿದವು.
ಮರುಮತಾಂತರವನ್ನು ಸಮರ್ಥಿಸಿಕೊಂಡಿರುವ ಆರ್ಎಸ್ಎಸ್ ಸಮನ್ವಯ ಸಮಿತಿಯ ಪಂಜಾಬ್ ಮುಖ್ಯಸ್ಥ ದಿನೇಶ್, “ಪಂಜಾಬ್ನಲ್ಲಿರುವ ಒಂದೂ ಗುರುದ್ವಾರ ಮುಚ್ಚಲು ಬಿಡುವುದಿಲ್ಲ” ಎಂದು ಹೇಳಿದ್ದಾರೆ. ಪಂಜಾಬ್ ಗಡಿಯಲ್ಲಿ ಹೆಚ್ಚಾಗಿ ಕಂಡುಬರುವ ಮಝಾಬಿ ಸಿಖ್ಖರಲ್ಲಿ ಶೇ. 40ರಷ್ಟು ಜನರು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದಾರೆ. ಮಝಾಬಿ ಸಿಖ್ಖರಿಗೆ ಪಂಜಾಬ್ನಲ್ಲಿ ಪರಿಶಿಷ್ಟ ಜಾತಿ ಸ್ಥಾನವಿದೆ. ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಹಾಗೂ ಅವರ ಮಗ ಮತ್ತು ಉಪಮುಖ್ಯಮಂತ್ರಿಯೂ ಆಗಿರುವ ಸುಖಬೀರ್ ಸಿಂಗ್ ಬಾದಲ್ ಇಬ್ಬರೂ ಬಲವಂತದ ಮತಾಂತರವನ್ನು ಟೀಕಿಸಿದ ಮರುದಿನವೇ ಈ ಮರುಮತಾಂತರ ನಡೆದಿರುವುದು ವಿಶೇಷ. ಕೆಲವು ದಿನಗಳ ಹಿಂದಷ್ಟೇ ಪಂಜಾಬ್ನಲ್ಲಿ ಧರ್ಮ ಜಾಗರಣ ಮಂಚ್ ನೇತೃತ್ವದಲ್ಲಿ 128 ಕ್ರೈಸ್ತ ಕುಟುಂಬಗಳು ಸಿಖ್ ಧರ್ಮಕ್ಕೆ ಮರು ಮತಾಂತರವಾಗಿದ್ದರು.

