ಮೂಡುಬಿದರೆ: ಅಪ್ರಾಪ್ತ ವಯಸ್ಸಿನ ಬಾಲಕನೋರ್ವ ತನ್ನದೇ ಕೋಮಿನ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಕ್ಕೆ ಯತ್ನಸಿದ ಘಟನೆ ಒಂದೂವರೆ ತಿಂಗಳ ಹಿಂದೆ ಶಿರ್ತಾಡಿ ಗ್ರಾ.ಪಂ ವ್ಯಾಪ್ತಿಯ ಮಕ್ಕಿಯಲ್ಲಿ ನಡೆದಿದ್ದು, ಬಾಲಕಿಯ ಹೆತ್ತವರು ಶನಿವಾರ ರಾತ್ರಿ ಮೂಡುಬಿದರೆ ಠಾಣೆಗೆ ದೂರು ನೀಡಿದ್ದಾರೆ.
ಮಕ್ಕಿ ಸಮೀಪದ 17ರ ಹರೆಯದ ಬಾಲಕ ತಮ್ಮ ಪಕ್ಕದ ಮನೆಯಲ್ಲಿರುವ ಹೃದಯ ಸಂಬಂಧಿ ಖಾಯಿಲೆಯ ತೊಂದರೆಯಿಂದ ಬಳಲುತ್ತಿರುವ 15ರ ಹರೆಯದ ಬಾಲಕಿ ಮೇಲೆ ಕೃತ್ಯ ಎಸಗಿದ್ದಾನೆ ಎಂದು ದೂರಲಾಗಿದೆ. ಬಾಲಕಿ ಮನೆಯ ಸಮೀಪವಿರುವ ಅಂಗಡಿಗೆ ಹೊರಟ ಸಂದರ್ಭದಲ್ಲಿ ಆಕೆಯನ್ನು ಕರೆದಿದ್ದು ಆತನ ಪರಿಚಯವಿದ್ದ ಆಕೆ ಸಮೀಪಕ್ಕೆ ಹೋದಾಗ ಆಕೆಯ ಕೈಯನ್ನು ಹಿಡಿದೆಳೆದು ಶೌಚಾಲಯದಲ್ಲಿ ಒಳಗೆ ಹಾಕಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಸಂದರ್ಭ ಬಾಲಕಿಯು ಬೊಬ್ಬಿಟ್ಟಾಗ ಆಕೆಯನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ.
ಈ ಬಗ್ಗೆ ಬಾಲಕಿಯ ಹೆತ್ತವರು ಜಮಾತಿಗೆ ದೂರನ್ನು ನೀಡಿದ್ದು ಅವರು ಬಾಲಕನನ್ನು ವಿಚಾರಣೆ ನಡೆಸಿ ಬಿಟ್ಟಿದ್ದಾರೆ.ಆದರೆ ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳದ ಹಿನ್ನಲೆಯಲ್ಲಿ ಹೆತ್ತವರು ಮೂಡುಬಿದರೆ ಠಾಣೆಗೆ ದೂರು ನೀಡಿದ್ದಾರೆ. ಮೂಡುಬಿದರೆ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಅವರ ನೇತೃತ್ವದಲ್ಲಿ ಪೊಲೀಸರು ಬಾಲಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ಬಾಲಾಪರಾಧಿಗಳ ಪುನರ್ ವಸತಿ ಕೇಂದ್ರಕ್ಕೆ ಹಸ್ತಾಂತರಿಸಿದ್ದಾರೆ.
