ಮೂಡುಬಿದಿರೆ: ಮಿಜಾರಿನ ನಾಗರಿಕ ಹಿತ ರಕ್ಷಣಾ ವೇದಿಕೆ ಮತ್ತು ಸಾರ್ವಜನಿಕರು ಒಟ್ಟಾಗಿ ಮಂಗಳೂರು-ಕಾರ್ಕಳ ಎಕ್ಸ್ಪ್ರೆಕ್ಸ್ ಬಸ್ಸು ಮತ್ತು ಅತೀವೇಗದಿಂದ ಸಾಗುವ ಟಿಪ್ಪರ್ಗಳನ್ನು ನಿಲ್ಲಿಸಿ ನಿಧಾನವಾಗಿ ಚಲಿಸಿ ಇಲ್ಲದಿದ್ದರೆ ಸಾರ್ವಜನಿಕರೆ ನಿಮಗೆ ಬುದ್ಧಿ ಕಲಿಸುತ್ತೇವೆಂದು ಚಾಲಕರುಗಳಿಗೆ ಎಚ್ಚರಿಕೆಯನ್ನು ನೀಡಿದ ಘಟನೆ ಮಿಜಾರು ಬೆಳ್ಳೆಚ್ಚಾರು ಕ್ರಾಸ್ ಬಳಿ ಆದಿತ್ಯವಾರ ನಡೆದಿದೆ.
IMG_9065

1 (1)
ಮಂಗಳೂರಿನಿಂದ ಕಾರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವ ಬಸ್ಸು, ಅಧಿಕ ಭಾರದ ವಸ್ತುಗಳನ್ನು ತುಂಬಿಸಿಕೊಂಡು ಹೋಗುವ ಟಿಪ್ಪರ್ಗಳ ಚಾಲಕರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆಯನ್ನು ಮಾಡುತ್ತಿದ್ದು ಹಲವು ಜನರ ಪ್ರಾಣವನ್ನು ಬಲಿತೆಗೆದುಕೊಳ್ಳಲಾಗಿದೆ ಹಾಗೂ ಶನಿವಾರದಂದು ತಮ್ಮದೇ ಊರಿನ ಮಹಿಳೆಯೋರ್ವರನ್ನು ಬಸ್ಸೊಂದು ಬಲಿತೆಗೆದುಕೊಂಡಿದ್ದು ಈ ಬಗ್ಗೆ ತೀವೃವಾಗಿ ಆಕ್ರೋಶ ವ್ಯಕ್ತ ಪಡಿಸಿರುವ ನಾಗರಿಕ ಹಿತರಕ್ಷಣಾ ವೇದಿಕೆಯು ಹೈವೇಯಲ್ಲಿ ಸಾಗಿ ಬಂದ ಖಾಸಗಿ ಬಸ್ಸುಗಳು ಮತ್ತು ಟಿಪ್ಪರ್ಗಳನ್ನು ತಡೆದು ಬದಿಗೆ ನಿಲ್ಲಿಸಿ ಚಾಲಕರಿಗೆ ‘ಮೆಲ್ಲ ಪೋಲೆ, ಏರೇರ್ನ ಜೀವ ಧರ್ಮೊಗು ದೆಪ್ಪೊಡ್ಚಿ,…. ‘ ( ನಿಧಾನ ಚಲಿಸಿ, ಯಾರ್ಯಾರದ್ದೋ ಜೀವ ಧರ್ಮಕ್ಕೆ ತೆಗೆಯಬೇಡಿ..) . ನಿಮಗೆ ಬಸ್ಸಿನಲ್ಲಿ ಡ್ರೈವಿಂಗ್ ಕೆಲಸ ಮಾಡಲು ಇಷ್ಟ ವಿದ್ದರೆ ಮಾತ್ರ ಮಾಡಿ ಯಾರದ್ದೋ ಜೀವವನ್ನು ಬಲಿ ತೆಗೆಯಲು ಕೆಲಸ ಮಾಡಬೇಡಿ ಇದು ನಿಮಗೆ ಮೊದಲ ಹಂತದಲ್ಲಿ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ಇನ್ನು ಮುಂದೆ ಎಲ್ಲಿಂದದಾದರೂ ಇಂತಹ ಬಸ್ ಅತೀ ವೇಗದಿಂದ ಬರುತ್ತಿದೆ ಎಂದು ಮಾಹಿತಿ ಬಂದರೆ ನಿಮ್ಮ ಬಸ್ಸುಗಳನ್ನು ಮಿಜಾರಿನಲ್ಲಿ ನಿಲ್ಲಿಸಿ ತಕ್ಕ ಬುದ್ಧಿ ಕಲಿಸುತ್ತೇವೆ ಎಂದು ತಿಳಿಸಿದ್ದಾರೆ.

ಈ ಕಿವಿಮಾತುಗಳನ್ನು ಕೇಳುವ ಆಸಕ್ತಿ ತೋರದೇ ವಾಹನ ಮುನ್ನಡೆಸುವ ಉತ್ಸಾಹದಲ್ಲಿದ್ದ ಕೆಲ ಚಾಲಕರ ಜತೆ ಬಿಸಿಯಾಗಿ ಏರು ಧ್ವನಿಯಲ್ಲೂ ಎಚ್ಚರಿಸುವ ಕೆಲಸ ನಡೆಯಿತು. ನಿಮ್ಮ ಮಾಲಕರ ಮೂಲಕ ಸಮಸ್ಯೆಯನ್ನು ಸಾರಿಗೆ ಅಧಿಕಾರಿಗಳ ಗಮನಕ್ಕೂ ತನ್ನಿ’ ಎನ್ನುವ ಸಲಹೆಗಳೂ ಸಾರ್ವಜನಿಕರಿಂದ ಕೇಳಿ ಬಂದವು.

ರಿಪೋರ್ಟರ್ ಸಲ್ಲಿಸಿ: ಸುಧಾಕರ ಪೂಂಜಾ
ಯಾವುದೇ ಅಪಘಾತಗಳಾದಾಗ, ಯಾರೇ ಸಾವನ್ನಪ್ಪಿದರೂ ವಾಹನ ಸ್ಟೇಶನಿಗೆ, ಹೆಣ ಪೋಸ್ಟ್ ಮಾರ್ಟಂಗೆ ಹಾಗೂ ಚಾಲಕನಿಗೆ ಜಾಮೀನು ನೀಡಿ ಮನೆಗೆ ಕಳಿಸಲಾಗುತ್ತದೆ. ಆದರೆ ಪೋಲೀಸ್ ಇಲಾಖೆಯಾಗಲೀ ಸಾರಿಗೆ ಇಲಾಖೆಯ ಸಂಬಂಧಪಟ್ಟವರಾಗಲೀ ರಸ್ತೆಯ ಸಮಸ್ಯೆಗಳ ಕುರಿತು ಜಿಲ್ಲಾಡಳಿತ ಯಾ ಮೇಲಾಧಿಕಾರಿಗಳಿಗೆ ಸಮಸ್ಯೆ ಪರಿಹರಿಸುವ ಕುರಿತು ಸಲಹಾ ವರದಿ ನೀಡುತ್ತಿಲ್ಲ. ಇನ್ನೊಂದೆಡೆ ನಿಮಿಷಕ್ಕೊಂದರಂತೆ ಬಸ್ಸುಗಳಿಗೆ ಪರ್ಮಿಟ್ ನೀಡುವ ಸಾರಿಗೆ ಇಲಾಖೆಯೂ ಅದರ ದುಷ್ಪರಿಣಾಮಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇಲ್ಲಿ ಬಸ್ಸು ಮಾಲಕರ ಒತ್ತಡಕ್ಕೆ ಕಮಿಷನ್, ಕಲೆಕ್ಷನ್ ಹೆಸರಿನಲ್ಲಿ ವೇಗದ ಚಾಲನೆಗೆ ಮುಂದಾಗುವ ಚಾಲಕರ ಬಗ್ಗೆ ಬಸ್ಸಿನಲ್ಲಿರುವ ಪ್ರಯಾಣಿಕರೂ ಎಚ್ಚರಿಸುವ ಕಾಲ ಬರಲಿದೆ ಎಂದು ವೇದಿಕೆಯ ಕಾರ್ಯದರ್ಸಿ ಸುಧಾಕರ ಪೂಂಜಾ ಮಾಧ್ಯಮದೊಂದಿಗೆ ಅನಿಸಿಕೆ ಹಂಚಿಕೊಂಡರು.

ಘನವಾಹನಗಳು ದ್ವಿಚಕ್ರವಾಹನ ಹಾಗೂ ಅದರ ಸವಾರರ ಬಗ್ಗೆ ತಾತ್ಸಾರದ ಭಾವನೆ ಹೊಂದಿದಂತಿದೆ. ಅಜಾಗರೂಕತೆ ಮತ್ತು ಅತಿವೇಗದ ಚಾಲನೆಯ ಬಗ್ಗೆ ಚಾಲಕರಿಗೆ ಅರಿವು ಮೂಡಿಸುವ ಸಾಂಕೇತಿಕ ಪ್ರಯತ್ನ ಮಾಡಿದ್ದೇವೆ. ಇದಕ್ಕೂ ಬೆಲೆ ಸಿಗದಿದ್ದರೆ ಮುಂದೆ ಬೃಹತ್ ಪ್ರತಿಭಟನೆ ಅನಿವಾರ್ಯವಾಗುತ್ತದೆ. ಆದರೆ ಮುಂದೆ ಅಜಾಗರೂಕತೆಯ , ಅತಿವೇಗದ ಚಾಲನೆ, ದುರ್ಘಟನೆಯ ಪ್ರಕರಣಗಳನ್ನು ಸಹಿಸಿ ಸುಮ್ಮನಿರುವುದಿಲ್ಲ ಎಂದರು.

ಮಿಜಾರಿನ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸುದರ್ಶನ್ ಪೂಂಜಾ, ಪಂಚಾಯತ್ ಸದಸ್ಯರಾದ ಹರಿಪ್ರಸಾದ್ ಶೆಟ್ಟಿ, ಕರುಣಾಕರ ಶೆಟ್ಟಿ, ಅಶೋಕ್ ಶೆಟ್ಟಿ ಎಡಪದವು, ಮಹಮ್ಮದ್ ಬಶೀರ್, ರಾಮಣ್ಣ, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಸಹಿತ ನೂರಾರು ಮಂದಿ ಈ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ.ಜಗದೀಶ ಅಧಿಕಾರಿಯವರೂ ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರೊಂದಿಗೆ ಕೆಲ ಹೊತ್ತು ಕಳೆದರು.
ಮೂಡುಬಿದಿರೆ ಹಾಗೂ ಬಜ್ಪೆ ಠಾಣೆಯ ಗಡಿ ಭಾಗದಲ್ಲಿರುವ ಈ ಪ್ರತಿಭಟನಾ ಸ್ಥಳದಲ್ಲಿ ಎರಡೂ ಠಾಣೆಯ ಪೊಲೀಸ್ ಸಿಬಂದಿಗಳು ಹಾಜರಿದ್ದರು.

ಮೂಡುಬಿದಿರೆಯಲ್ಲಿ ಆಳ್ವಾಸ್ ವಿದ್ಯಾಗಿರಿಯಿಂದ ಪೇಟೆಗೆ ಬರುವ ಹಾದಿಯುದ್ದಕ್ಕೂ ವಿಶೇಷವಾಗಿ ಗಾಂಧಿನಗರದ ನೇರ ರಸ್ತೆಯಲ್ಲಿ ವಾಹನಗಳ ಅಬ್ಬರ ಕೇಳಿ ಬರುತ್ತಲೇ ಇದೆ. ಪೇಟೆಯಲ್ಲಿ ಸಿಂಡಿಕೇಟ್ ಬ್ಯಾಂಕ್ , ಮಾರ್ಕೆಟ್ ಮುಂಭಾಗ, ಪೇಪರ್ ಮಿಲ್, ಮಹಾವೀರ ಕಾಲೇಜಿನಿಂದ ಜ್ಯೋತಿನಗರ, ರೋಟರಿ ಶಾಲೆ ಹೀಗೆ ಪೇಟೆಗೆ ಬರುವ ಎಲ್ಲ ಮುಖ್ಯ ರಸ್ತೆಗಳಲ್ಲಿಯೂ ಸಾಗಿ ಬರುವ ಘನವಾಹನಗಳಿಗೆ, ಅವುಗಳ ಕರ್ಕಶ ಹಾರ್ನ್ , ವೇಗಕ್ಕೆ ಕಡಿವಾಣವೇ ಇಲ್ಲವಾಗಿದೆ.
ಕೆಲವೊಮ್ಮೆ ರೋಟರಿ ಶಾಲೆ ಬಳಿ, ಮಿಜಾರು ಶಾಲೆ ಬಳಿ, ಹೀಗೆ ದುರ್ಘಟನೆ ನಡೆದಾಗಲೆಲ್ಲ ನಾಲ್ಕುದಿನ ಬ್ಯಾರಿಕೇಡ್ ಇಟ್ಟು ಮತ್ತೆ ಎಂದಿನಂತಾಗುವ ವ್ಯವಸ್ಥೆ ಬದಲಾಗಬೇಕಾಗಿದೆ. ಸಿಬಂದಿಗಳ, ಬ್ಯಾರಿಕೇಡ್ಗಳ ಕೊರತೆ ಮಾತ್ರವಲ್ಲ ಸುವ್ಯವಸ್ಥೆಗೆ ಸಂಬಂಧಪಟ್ಟವರು ಶೀಘ್ರ ಕಾರ್ಯಪ್ರವರ್ತರಾಗಬೇಕಾಗಿದೆ.

By Suddi9

Leave a Reply

Your email address will not be published. Required fields are marked *