ಬಂಟ್ವಾಳ :ಭಾರತೀಯ ಜನತಾ ಪಾರ್ಟಿ ಬಂಟ್ವಾಳ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ಹಾಗೂ ಜನವಿರೋಧಿ ನೀತಿಗಳ ವಿರುದ್ಧ “ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ” ಎಂಬ ಘೋಷವಾಕ್ಯದೊಂದಿಗೆ ಬಂಟ್ವಾಳ ನಗರದಲ್ಲಿ ಪಾದಯಾತ್ರೆಯನ್ನು ನಡೆಸಲಾಯಿತು.
ಪಾದಯಾತ್ರೆಗೆ ಚಾಲನೆ ನೀಡಿ ಬಳಿಕ ಪುರಸಭಾ ಕಚೇರಿ ಮುಂಭಾಗ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ ಉಳಿಪಾಡಿ ಅವರು, ಜನರು ಕೇವಲ ಮನೆಯಲ್ಲಿ ಕುಳಿತು ಮೊಬೈಲ್ ಹಿಡಿದುಕೊಂಡು ಕಾಲ ಕಳೆಯದೆ, ಅಭಿವೃದ್ಧಿ ಯ ದೃಷ್ಠಿಯಿಂದ ನಮ್ಮ ಹಕ್ಕುಗಳಿಗಾಗಿ ಪ್ರತಿಯೊಬ್ಬರೂ ಬೀದಿಗಿಳಿದು, ಪ್ರತಿಭಟನೆಯ ಮೂಲಕ ಒಂದು ಹೆಜ್ಜೆ ಮುಂದಿಟ್ಟು ಹೋರಾಟ ನಡೆಸಬೇಕಾಗಿದೆ ಎಂದರು.
ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೆಸ್ ಸರ್ಕಾರವು ಬೆಲೆ ಏರಿಕೆಯ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ.
ಕ್ಷೇತ್ರಕ್ಕೆ ಯಾವುದೇ ಹೊಸ ಅಭಿವೃದ್ಧಿ ಕಾರ್ಯಗಳನ್ನು ಮಂಜೂರು ಮಾಡದೆ, ಮೂಲ ಸೌಲಭ್ಯಗಳನ್ನು ಒಂದೊಂದಾಗಿ ಕಿತ್ತುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕರು. “ಜನರ ಹಕ್ಕನ್ನು ಕಸಿಯುತ್ತಿರುವ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿ ಗ್ರಾಮ,ಗ್ರಾಮಗಳಲ್ಲು ಹೋರಾಟ ನಡೆಸಲಿದೆ ಎಂದರು.
ಬಿಜೆಪಿಯ ರಾಜ್ಯ ನಾಯಕ ವಿಕಾಸ್ ಪುತ್ತೂರು ಮಾತನಾಡಿ, ಕಾಂಗ್ರೆಸ್ ಸರಕಾರ ಪ್ರತಿಯೊಂದು ಹೆಜ್ಜೆಯಲ್ಲೂ ಜನವಿರೋಧಿ ನೀತಿಯನ್ನು ಅನುಸರಿಸುವ ಮೂಲಕ ಅಭಿವೃದ್ದಿಶೂನ್ಯವಾಗಿದೆ. ಇದರ ವಿರುದ್ದ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತಿತ್ತು. ಕಾಂಗ್ರೆಸ್ ಸರಕಾರ ಬಂದ ಬಳಿಕ ಕರ್ನಾಟಕದಲ್ಲಿ ಕಗ್ಗತ್ತಲು ಆವರಿಸಿದೆ. ನಗರ ಮತ್ತು ಗ್ರಾಮೀಣ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಜನರ ಯಾವುದೇ ಕೆಲಸ ಆಗುತ್ತಿಲ್ಲ. ಜಿ. ಪಂ., ತಾ.ಪಂ. ಚುನಾವಣೆ ನಡೆಸದೆ ಐದಾರು ವರ್ಷಗಳಾದರೆ,ನಗರ ಸ್ಥಳೀಯಾಡಳಿತ ಸಂಸ್ಥೆಯ ಚುನಾವಣೆಗೂ ಮೀನಾಮೇಷ ನಡೆಸುತ್ತಿದೆ. ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಆಗಬೇಕೆಂಬುದು ಮಹಾತ್ಮಾಗಾಂಧೀಜಿ ಅವರ ಕನಸಾಗಿತ್ತು. ಅವರ ಹೆಸರಲ್ಲಿ ರಾಜಕಾರಣ ಮಾಡುವ ಕಾಂಗ್ರೆಸ್ ಪಕ್ಷ ಇದಕ್ಕೆ ತಿಲಾಂಜಲಿ ಇಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರಕಾರದ ಖಜಾನೆ ಖಾಲಿಯಾಗಿದ್ದು, ಇಡೀ ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳು ಕುಂಠಿತವಾಗಿದೆ. ಯಾರೂ ಇದರ ವಿರುದ್ಧ ಧ್ವನಿ ಎತ್ತಬಾರದು ಎಂದು ಚುನಾವಣೆ ನಡೆಸುತ್ತಿಲ್ಲ ಎಂದು ಟೀಕಾಪ್ರಹಾರಗೈದ ಅವರು ನಿಜಲಿಂಗಪ್ಪ, ಬಂಗಾರಪ್ಪ ದೇವರಾಜ ಅರಸ್, ರಾಮಕೃಷ್ಣ ಹೆಗಡೆ ಅವರಂಥವರು ಆಳಿದ ರಾಜ್ಯವನ್ನು ಇವತ್ತು ಸಿಡಿ ಇಟ್ಟುಕೊಂಡು ಆಳುವ ಮುಖ್ಯಮಂತ್ರಿ ರಾಜ್ಯದಲ್ಲಿದ್ದಾರೆ ವಾಗ್ದಾಳಿ ನಡೆಸಿದರು.

ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್,ಪ್ತ.ಕಾರ್ಯದರ್ಶಿಗಳಾದ ಸುದರ್ಶನ ಬಜ, ಶಿವಪ್ರಸಾದ್ ಶೆಟ್ಟಿ,ಪಕ್ಷದಪ್ರಮುಖರಾದ ರಾಮದಾಸ ಬಂಟ್ವಾಳ, ಹರಿಕೃಷ್ಣ ಬಂಟ್ವಾಳ, , ದಿನೇಶ ಅಮ್ಮೂರು, ಸುರೇಶ್ ಕುಲಾಲ್, ದಿನೇಶ್ ಭಂಡಾರಿ, ಸುರೇಶ್ ಕುಮಾರ್, ಗೋವಿಂದ ಪ್ರಭು, ಹರಿಪ್ರಸಾದ್, ಪ್ರಣಾಮ್ ರಾಜ್, ಗಂಗಾಧರ ಪೂಜಾರಿ, ವಿದ್ಯಾವತಿ ಪ್ರಮೋದ್ ಕುಮಾರ್, ಶಶಿಕಲಾ, ಪುರುಷೋತ್ತಮ ಶೆಟ್ಟಿ ವಾಮದಪದವು, ಕೇಶವ ದೈಪಲ, ಮಹೇಶ್ ಶೆಟ್ಟಿ ಸಹಿತ ನಾನಾ ಘಟಕಗಳ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಬಳಿಕ ಮುಖ್ಯಾಧಿಕಾರಿಯವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಇದಕ್ಕು ಮುನ್ನ ಬಂಟ್ವಾಳ ಬೈಪಾಸ್ ಜಂಕ್ಷನ್ ನಿಂದ ಪುರಸಭೆಯವರೆಗೆ ಪಾದಯಾತ್ರೆ ನಡೆಯಿತು.
ನಾವೂರು ಗ್ರಾ.ಪಂ. ಮುಂದೆ ಪ್ರತಿಭಟನೆ:
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ನಾವೂರು ಶಕ್ತಿಕೇಂದ್ರದ ವತಿಯಿಂದ ಜನಾಂದೋಲನ ಪಾದಯಾತ್ರೆ ಹಾಗೂ ಪ್ರತಿಭಟನೆ ನಾವೂರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ನಡೆಸಲಾಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿ ಅವರು ಭಾಗವಹಿಸಿ ಮಾತನಾಡಿ,ರಾಜ್ಯ ಸರ್ಕಾರದ ನೀತಿಯನ್ನು ಖಂಡಿಸಿದರು.
ಬಿಜೆಪಿ ಬಂಟ್ವಾಳಮಂಡಲದ ಅಧ್ಯಕ್ಷರಾದ ಚೆನ್ನಪ್ಪ ಆರ್ ಕೋಟ್ಯಾನ್, ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ್ ಬಜ, ಶಿವಪ್ರಸಾದ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಮೂರು, ಮಂಡಲ ಕಾರ್ಯದರ್ಶಿ ಹರೀಶ್ ಶೆಟ್ಟಿ ಪಡು, ಶಕ್ತಿಕೇಂದ್ರ ಪ್ರಮುಖ ಜನಾರ್ಧನ ಕೊಂಬೆಟ್ಟು,ಪಕ್ಷದ ಸ್ಥಳೀಯ ಮುಖಂಡರಾದ ಸದಾನಂದ ಗೌಡ ನಾವೂರು, ಸಂಪತ್ ಕುಮಾರ್, ಶಾಂತವೀರ ಪೂಜಾರಿ, ಧನಂಜಯ ಕನಪಾದೆ, ವಿಜಯ್ ಕುಮಾರ್, ಇಂದಿರಾ, ತ್ರಿವೇಣಿ, ಶೀಲಾ ಮತ್ತಿತರರು ಉಪಸ್ಥಿತರಿದ್ದರು.
