ಬಂಟ್ವಾಳ: ಕಳೆದ ವಿಧಾನಸಭಾ ಚುನಾವಣೆಯ ವೇಳೆ ಮಾತು ಕೊಟ್ಟಿದ್ದ  ಐದು ಗ್ಯಾರಂಟಿಗಳನ್ನು ಸರ್ಕಾರ ಜಾರಿಗೆ ತಂದಿರುವುದು ದೇಶದಲ್ಲೇ ಐತಿಹಾಸಿಕವಾದ ಕ್ರಮ. ಗ್ಯಾರಂಟಿ ಯೋಜನೆಗಳ ಬಗ್ಗೆ ಹಲವಾರು ಟೀಕೆ -ಟಿಪ್ಪಣಿಗಳು ವ್ಯಕ್ತವಾಗಿದ್ದರೂ ಸರ್ಕಾರ ಈ ರಾಜ್ಯದ ಬಡಜನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ ಖಾದರ್‌ ಹೇಳಿದರು.
ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ  ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಭಾನುವಾರ ಸಂಜೆ ತಾಲೂಕಿನ ಕೊಡ್ಮಾಣ್‌ ಶಾಲಾ ವಠಾರದಲ್ಲಿ ಮೇರಮಜಲು, ಕೊಡ್ಮಾಣ್, ಪುದು ಹಾಗೂ ತುಂಬೆ ಗ್ರಾಮಗಳ ಗ್ಯಾರಂಟಿ ಉತ್ಸವ ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಅನುಷ್ಠಾನ ಮಾಡಿರುವ ಗ್ಯಾರಂಟಿ ಯೋಜನೆಗಳು ಇತರ ರಾಜ್ಯಗಳಲ್ಲೂ  ಅನುಷ್ಠಾನಗೊಳ್ಳಲು ಬುನಾದಿಯಾಗಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬಡ ಜನರಲ್ಲಿ ಧೈರ್ಯ, ಆತ್ಮವಿಶ್ವಾಸ ತುಂಬಿದೆ ಎಂದ ಸಚಿವರು ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸಿನ ತೊಂದರೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಬಂಟ್ವಾಳ ತಾಲೂಕಿನಲ್ಲಿ 743 ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆಂದೇ ವ್ಯಯಿಸಲಾಗಿದೆ. ಇದರಲ್ಲಿ 428 ಕೋಟಿ ರೂ.ಯನ್ನು ಗೃಹಲಕ್ಷ್ಮೀ ಯೋಜನೆಗೆ ನೀಡಲಾಗಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಫಲಾನುಭವಿಗಳು ಪಡೆದ ಹಣದಿಂದ ರಾಜ್ಯದ ಆರ್ಥಿಕತೆ ಚಲನಶೀಲವಾಗುತ್ತಿದೆಯಲ್ಲದೆ ಆರ್ಥಿಕ ಸ್ಥಿತಿಗತಿ ಏರುಗತಿಯಲ್ಲಿ ಸಾಗುತ್ತದೆ ಎಂದು ಸಚಿವ ಖಾದರ್ ವಿಶ್ಲೇಷಿಸಿದರು.
ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಕೊಟ್ಟು ಅವರನ್ನು ಉನ್ನತ ಸ್ಥಾನಕ್ಕೆ ಏರಿಸುವ ಕೆಲಸ ತಾಯಂದಿರಿಂದ ಆಗಬೇಕು. ತುಳು ಭಾಷೆಗೆ ರಾಜ್ಯದ ಏರಡನೇ ಭಾಷೆಯ ಸ್ಥಾನಮಾನ ಕೊಟ್ಟಿರುವುದು ರಾಜ್ಯ ಸರ್ಕಾರದ ಐತಿಹಾಸಿಕ ಕ್ರಮ ಎಂದು ಹೇಳಿದರಲ್ಲದೆ
ಕೊಡ್ಮಾಣ್‌, ಮೇರಮಜಲು ಗ್ರಾಮಗಳ ಅಭಿವೃದ್ಧಿಯಲ್ಲಿ  ಕೀರ್ತಿಶೇಷ ಕೊಡ್ಮಾಣ್‌ ಕಾಂತಪ್ಪ ಶೆಟ್ಟಿಯವರು ನೀಡಿದ ಕೊಡುಗೆಯನ್ನೂ ಸಚಿವ ಖಾದರ್‌ ಅವರು ಈ ಸಂದರ್ಭ ಸ್ಮರಿಸಿದರು.  

ಕರ್ನಾಟಕ ಗೇರು ಅಭಿವೃದಧಿ ನಿಗಮದ ಅಧ್ಯಕ್ಷರಾದ ಮಮತಾ ಗಟ್ಟಿ ಮಾತನಾಡಿದರು.ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು ಸಮಿತಿಯ ಅಧ್ಯಕ್ಷರಾದ ಜಯಂತಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಜಿಲ್ಲಾ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್‌ ಮುಂಡೋಡಿ, ಉಪಾಧ್ಯಕ್ಷರಾದ ನಾರಾಯಣ್‌ ನಾಯ್ಕ್,
ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್,ಪುದು ಗ್ರಾಮ ಪಂಚಾಯತ್‌ ಅಧ್ಯಕ್ಷ ರಮ್ಲಾನ್‌ ಮಾರಿಪಳ್ಳ,
ಮೇರಮಜಲು ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷೆ  ವೃಂದಾ ಪೂಜಾರಿ,  ಪ್ರಮುಖರಾದ ಅನಿಲ್‌ ಕುಮಾರ್‌ ಅಬ್ಬೆಟ್ಟು, ಕೃಷ್ಣಪ್ಪ ಪೂಜಾರಿ, ಚಂದ್ರಶೇಖರ್‌ ಆಚಾರ್ಯ, ಸತೀಶ್‌ ಕುಮಾರ್‌, ಕರೀಂ ಬೊಳ್ಳಾಯಿ, ಮಜೀದ್‌ ಕನ್ಯಾನ, ದಿನೇಶ್‌ ಪೂಜಾರಿ, ಸುರೇಶ್‌ ಭಟ್ನಗರ, ಗಣೇಶ್‌ ಸಾಲ್ಯಾನ್‌, ಗಂಗಾಧರ ಗೌಡ, ರಫೀಕ್‌ ಉಳ್ಳಾಲ, ಅಮಿತಾ ಅಶ್ವಿನಿ ಉಳ್ಳಾಲ, ಜಯಲಕ್ಷ್ಮೀ, ಯೋಗೀಶ್‌ ಪ್ರಭು, ಶಾಂತಿ ನೋಬರ್ಟ್‌, ಫಾರೂಕ್‌ ಫರಂಗಿಪೇಟೆ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಸಚಿವ ಯು.ಟಿ ಖಾದರ್‌,ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಪಂಚ ಗ್ಯಾರಂಟಿ ಅನುಷ್ಠಾನ ಬಂಟ್ವಾಳ ತಾ.ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ ಹಾಗೂ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಕಾರ್ಯ ನಿರ್ವಹಿಸಿದ ಬಿಎಲ್‌ಒಗಳನ್ನು ಸನ್ಮಾನಿಸಲಾಯಿತು. 
ಬಂಟ್ವಾಳ ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್‌ ಕುಮಾರ್‌ ಸ್ವಾಗತಿಸಿದರು. ಇರ್ಫಾನ್‌ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು. 

By Suddi9