ಮೂಡುಬಿದಿರೆ : ಇಲ್ಲಿನ ಗುರು ಬಸದಿಯ ಸಿದ್ಧಾರ್ಥ ದರ್ಶನ ಮಂದಿರದಿಂದ ಕಳೆದ ವರ್ಷ ಜುಲೈ 6ರಂದು ಕಳವು ಆಗಿರುವ ಸಿದ್ಧಾಂತ ಮಂದಿರದ ಕೋಟ್ಯಾಂತರ ರೂ ಮೌಲ್ಯದ ಬೆಲೆ ಬಾಳುವ ತೀರ್ಥಂಕರರ 15 ಪ್ರತಿಮೆಗಳನ್ನು ಮೂಡುಬಿದಿರೆ ನ್ಯಾಯಾಲಯವು ಕೆಲವು ಶರತ್ತುಗಳೊಂದಿಗೆ ಶನಿವಾರ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೆ ಹಸ್ತಾಂತರಗೊಳಿಸಿದೆ.

ಮೂರ್ತಿಗಳನ್ನು ಶನಿವಾರ ರಾತ್ರಿ ಜೈನ ಮಠಕ್ಕೆ ತರಲಾಗಿದ್ದು ಮಠದಲ್ಲಿ ಮೂರ್ತಿಗಳಿಗೆ ವಿಶೇಷ ಅಭಿಷೇಕ ಸಲ್ಲಿಸಲಾಯಿತು. ಮೂರ್ತಿಗಳು ತಮ್ಮ ವಶಕ್ಕೆ ಸಿಕ್ಕಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಮೂಡುಬಿದಿರೆ ಶ್ರೀಗಳು ಮೂರ್ತಿಗಳು ಮಠಕ್ಕೆ ಮರಳಿ ಬಂದಿರುವುದು ದೇವರು ಬಂದಷ್ಟೇ ಸಂತೋಷವಾಗಿದೆ ಇವುಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡಲಾಗುವುದು ಎಂದರು

