ಬಂಟ್ವಾಳ: ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಪರಿಸರದಲ್ಲಿ ಭಾನುವಾರ ಮದುವೆಯ ನೆನಪನ್ನು ಮರುಕಳಿಸುವ ಸಂಭ್ರಮ, ಸಡಗರದ ವಾತಾವರಣ,ಆದರೆ ಅದು ಮದುವೆಯ ಕಾರ್ಯಕ್ರಮವಲ್ಲ. ಇತ್ತೀಚೆಗಷ್ಟೇ ಗೃಹಸ್ಥಾಶ್ರಮವನ್ನು ಪ್ರವೇಶಿಸಿದ ನವದಂಪತಿಗಳ ಸಮಾವೇಶದ ೨೫ನೇ ವರ್ಷದ ಸಂಭ್ರಮವಾಗಿತ್ತು.
ಕಾರ್ಯಕ್ರಮಕ್ಕಾಗಮಿಸಿದ ದಂಪತಿಗಳ ಕಾಲು ತೊಳೆದು, ಆರತಿ ಬೆಳಗಿ, ಅರಿಶಿನ ಕುಂಕುಮ ಹೂವು ನೀಡಿ ಸ್ವಾಗತಿಸಿ ಅಗ್ನಿ ಹೋತ್ರಕ್ಕೆ ಘೃತಾಹುತಿ ನೀಡಿ ತಾಯಿ ಶಾರದೆಗೆ ಪುಷ್ಪಾರ್ಚನೆಗೈದು ವೇದಘೋಷಗಳೊಂದಿಗೆ ಸಭಾಂಗಣಕ್ಕೆ ಕರೆತರಲಾಯಿತು.

ಬಳಿಕ ದಿನಪೂರ್ತಿ ನಡೆದ ಕಾರ್ಯಕ್ರಮದಲ್ಲಿ ದಂಪತಿಗಳು ಪರಸ್ಪರ ಪರಿಚಯ, ಗುಂಪುಚರ್ಚೆಗಳು, ಅನಿಸಿಕೆಗಳು, ಸಲಹೆಗಳು ಹಾಗೂ ಹಿರಿಯರ ಮಾರ್ಗದರ್ಶನ ಪಡೆದು ಹೊಸ ದೃಷ್ಟಿ ಕೋನದೊಂದಿಗೆ ಮರಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೇಷ್ಠ ಪ್ರಚಾರಕ ಸು. ರಾಮಣ್ಣ ಸಮಾವೇಶ ಉದ್ಘಾಟಿಸಿ ಮಾತನಾಡಿ ಕ್ಯಾ. ಸ್ಮಿತ್ ಮಚ್ಚಾರ್ ಅವರ ಕಾರ್ಯವನ್ನು ಶ್ಲಾಘಿಸುತ್ತಾ, ಇದು ಭಾರತೀಯ ಚಿಂತನೆಯ ವಿಧಾನ. ‘ವಸುಧೈವ ಕುಟುಂಬಕಂ’ ಎಂಬ ಮಾತಿನ ಪ್ರತ್ಯಕ್ಷ ಆಚರಣೆ ಎಂದರು.

ಭಾರತೀಯ ಕುಟುಂಬ ವ್ಯವಸ್ಥೆಯ ಬಗ್ಗೆ ಮಾತನಾಡಿದ ಅವರು ಕುಟುಂಬವನ್ನು ನಾವು ರಕ್ಷಿಸಿದರೆ ಕುಟುಂಬವು ನಮ್ಮನ್ನು ರಕ್ಷಿಸುತ್ತದೆ ಎಂಬ ನಂಬಿಕೆಯಿರಲಿ ಮತ್ತು ಇದಕ್ಕೆ ಬೇಕಾದ ಪ್ರೇರಣೆ, ಸಲಹಾ ರೂಪದ ಬಾಳಿನಬುತ್ತಿಯನ್ನು ಇಲ್ಲಿಂದ ಕಟ್ಟಿಕೊಂಡು ಹೋಗಿ ಎಂಬ ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಪ್ರಪಂಚದಲ್ಲೇ ಭಾರತದ ಅಸ್ಮಿತೆಯನ್ನು ಗುರುತಿಸುವುದು ಇಲ್ಲಿನ ಕುಟುಂಬ ವ್ಯವಸ್ಥೆಯ ಮೂಲಕ. ಹಾಗಾಗಿ ಶಿಕ್ಷಣ ಸಂಸ್ಥೆಯಾಗಿ ಸಾಮಾಜಿಕ ಮೌಲ್ಯವನ್ನು ಕಾಪಾಡುವ ಹೊಣೆಗಾರಿಕೆ ನಮಗಿದೆ. ಅದಕ್ಕಾಗಿ ಕಳೆದ ೨೫ ವರ್ಷಗಳಿಂದ ಇದನ್ನು ಆಯೋಜಿಸುತ್ತಾ ಬಂದಿದೆ ಎಂದರು.
ಕುಟುಂಬ ಪ್ರಬೋಧನ್ನ ಪ್ರಾಂತ ಟೋಳಿ ಸದಸ್ಯರಾದ ಗಜಾನನ ಪೈ ಅವರು ದಿಕ್ಸೂಚಿ ಭಾಷಣಗೈದು ಮದುವೆ ಕೇವಲ ಒಪ್ಪಂದವಲ್ಲ, ನಮ್ಮ ಹಿರಿಯರು ಬಾಳಿ ಬದುಕಿದ ರೀತಿ ನೀತಿಗಳನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುತ್ತಾ ಉತ್ತಮ ಸಂತತಿಯ ಮೂಲಕ ಸಮಾಜ ನಿರ್ಮಾಣದ ದೂರದೃಷ್ಟಿಯನ್ನು ಹೊಂದಿದೆ. ಇದರೊಂದಿಗೆ ಸಂಬಂಧ, ಸಹವಾಸ, ಸಂವಾದ, ಸಂಸ್ಕೃತಿ, ಸಂತತಿ, ಸಂಸ್ಕಾರ, ಸತ್ಕಾರ ಈ ಸಪ್ತ ಸೂತ್ರಗಳನ್ನು ಅಳವಡಿಸಿಕೊಂಡರೆ ಸಂತೃಪ್ತ ಜೀವನ ಸಾಧ್ಯ ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಮತ್ತು ಕಮಲಾಕ್ಷಿ ಮೋನಪ್ಪ ಭಂಡಾರಿ ಇವರು ಹಿರಿಯ ದಂಪತಿಗಳಾಗಿ ಭಾಗವಹಿಸಿ “ಪರಸ್ಪರ ನಂಬಿಕೆಯೇ ಕುಟುಂಬವನ್ನು ದೃಢಗೊಳಿಸುವುದು” ಎಂದು ತಮ್ಮ ದಾಂಪತ್ಯದ ಜೀವನಾನುಭವ ಹಂಚಿಕೊಂಡರು.
ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ ಎನ್. ಉಪಸ್ಥಿತರಿದ್ದರು.ಪುರುಷರ ಮತ್ತು ಮಹಿಳೆಯರ ಗುಂಪು ಚರ್ಚೆಯನ್ನು ಡಾ| ಯಶೋದಾ ರಾಮಚಂದ್ರ ಹಾಗೂ ಡಾ| ಕಮಲಾ ಪ್ರಭಾಕರ ಭಟ್ ನಡೆಸಿಕೊಟ್ಟರು. ಸಂಗೀತ ಮತ್ತು ಸುಜಿತ್ ಕೊಟ್ಟಾರಿ ವಿಷಯ ಮಂಡಿಸಿದರು.
ದೀಪಿಕಾ ಪ್ರಾರ್ಥಿಸಿದರು. ಚೈತ್ರ ಎನ್ ಕೆ ಸ್ವಾಗತಿಸಿದರು.ಸಂಪ್ರಿಯಾ ನಿರೂಪಿಸಿದರು.ನೇತ್ರಾವತಿ ವಂದಿಸಿದರು. ಪವಿತ್ರ ಪ್ರೇರಣಾ ಗೀತೆ ಹಾಡಿದರು.ಕೂಲಿ ಕೆಲಸದಿಂದ ತೊಡಗಿ ಕೃಷಿಕರು, ಉದ್ದಿಮೆದಾರರು, ಸಾಫ್ಟ್ ವೇರ್ ತಂತ್ರಜ್ಞರು, ವೈದ್ಯರು, ನ್ಯಾಯವಾದಿಗಳು, ಶಿಕ್ಷಕರು ಹೀಗೆ ಒಟ್ಟು ೯೭ ದಂಪತಿಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಮಾತೃಭಾರತಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ೧೨೦ಕ್ಕೂ ಹೆಚ್ಚು ತಾಯಂದಿರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
