ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ದೇಶದ ಪ್ರಧಾನ ಮಂತ್ರಿಯಾಗಿ ಸಾರ್ವಜನಿಕ ಸೇವೆಯಲ್ಲಿ 25 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಿರುವ ‘ಸೇವಾಜ್ಯೋತಿ’ ಯಾತ್ರೆಯ ಸಮಾರೋಪ ಸಮಾರಂಭವು ಅ.7ರಂದು ಬ್ರಹ್ಮರಕೊಟ್ಲುವಿನಲ್ಲಿರುವ ಬಂಟವಾಳ ಬಂಟರಭವನದಲ್ಲಿ ನಡೆಯಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ತಿಳಿಸಿದ್ದಾರೆ.

ಸೋಮವಾರ ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ಪ್ರದಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಜೀವನದ ವಿವಿಧ ಹಂತಗಳ ಸಾಧನೆ, ಆಡಳಿತಾತ್ಮಕ ಬದಲಾವಣೆ ಹಾಗೂ ದೇಶದ ಅಭಿವೃದ್ಧಿಯಲ್ಲಿನ ಪ್ರಮುಖ ಹೆಜ್ಜೆಗಳನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ‘ಸೇವಾ ಸಂಕಲ್ಪ’ ಅಭಿಯಾನದಡಿ ಸೇವಾಜ್ಯೋತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಅಂದು ಬೆಳಿಗ್ಗೆ 8.30 ಕ್ಕೆ ಬಿ.ಸಿ.ರೋಡ್‌ನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ “ಸೇವಾ ಜ್ಯೋತಿ” ವಾಹನ ರ್ಯಾಲಿ ಆರಂಭವಾಗಲಿದ್ದು, 9.30 ಕ್ಕೆ ಜಾಥ ಬಂಟರ ಭವನ ತಲುಪಲಿದ್ದು, 10 ಗಂಟೆಗೆ ಸಮಾವೇಶ ನಡೆಯಲಿದೆ.ಸಂಸದರಾದ ಕ್ಯಾ.ಬ್ರಿಜೇಶ್ ಚೌಟ,ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು,ಮುಖಂಡರು,ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ರಾಜ್ಯದ ಎಲ್ಲಾ ಜಿಲ್ಲೆಯಲ್ಲು ಸೇವಾ ಜ್ಯೋತಿ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯ ಎಲ್ಲಾ ತಾಲೂಕಿನ ಕಾರ್ಯಕರ್ತರ ಅನುಕೂಲಕ್ಕಾಗಿ ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ಬಂಟವಾಳ ಬಂಟರಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ವಾಹನ ರ್ಯಾಲಿಗಳ ಮೂಲಕ ಸೇವಾಜ್ಯೋತಿ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆಯಾ ಕ್ಷೇತ್ರಗಳಿಂದ ಹೊರಡುವ ಯಾತ್ರೆಗಳು ಬಂಟ್ವಾಳದಲ್ಲಿ ನಡೆಯುವ ಜಿಲ್ಲಾ ಮಟ್ಟದ ಸಮಾರೋಪದಲ್ಲಿ ಸಂಪನ್ನಗೊಳ್ಳಲಿದೆ ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು.
ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ದೇಶದ ವಿವಿಧ ಕ್ಷೇತ್ರಗಳಲ್ಲಿ ಹಲವು ಬದಲಾವಣೆಗಳಾಗಿದ್ದು, ಅಭಿವೃದ್ಧಿಯ ವೇಗ ಮತ್ತಷ್ಟು ಹೆಚ್ಚಿದೆ. ಸಾರ್ವಜನಿಕ ಸೇವೆಯಲ್ಲಿ ಅವರು ಪೂರೈಸಿರುವ 25 ವರ್ಷಗಳ ಅವಧಿಯನ್ನು ಸ್ಮರಿಸುವ ಹಾಗೂ ಅವರ ನೇತೃತ್ವದಲ್ಲಿ ಕೈಗೊಳ್ಳಲಾದ ವಿವಿಧ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಈ ಯಾತ್ರೆ ಆಯೋಜಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಲಿರುವುದರಿಂದ ಇದರ ಯಶಸ್ವಿಗಾಗಿ ಪಕ್ಷದ ಜಿಲ್ಲಾ ಹಾಗೂ ಸ್ಥಳೀಯ ಘಟಕಗಳು ಸಿದ್ಧತೆಯಲ್ಲಿ ತೊಡಗಿಸಿ ಕೊಂಡಿವೆ ಎಂದರು.
ಗುದ್ದಲಿಪೂಜೆ:ಇದಕ್ಕು ಮೊದಲು ಬಿ.ಸಿ.ರೋಡು ಪುಂಜಾಲಕಟ್ಟೆ ವರೆಗಿನ ಹೆದ್ದಾರಿಯ ಬಾಕಿ ಉಳಿದಿರುವ ಬಿ.ಸಿ.ರೋಡಿನ ನಾರಾಯಣಗುರು ವೃತ್ತದಿಂದ ಗಾಣದಪಡ್ಪ ನಾರಾಯಣ ಗುರು ಮಂದಿರದವರೆಗಿನ ಹೆದ್ದಾರಿ ಅಗಲೀಕರಣ19.84 ಕೋಟಿ ವೆಚ್ಚದ ಕಾಮಗಾರಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಶಿಲಾನ್ಯಾಸವನ್ನು ನೆರವೇರಿಸಲಿದ್ದಾರೆ ಎಂದು ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್, ಪ್ರ.ಕಾರ್ಯದರ್ಶಿಗಳಾದ ಸುದರ್ಶನ್ ಬಜ, ಶಿವಪ್ರಸಾದ್ ರೈ,ಜಿಲ್ಲಾ ಕಾರ್ಯದರ್ಶಿದಿನೇಶ್ ಅಮ್ಟೂರು,ಮಾಜಿ ಜಿ.ಪಂ.ಸದಸ್ಯರಾದ ಸುಲೋಚನ ಜಿ.ಕೆ. ಭಟ್, ಕಮಲಾಕ್ಷಿ ಕೆ. ಪೂಜಾರಿ, ಮಾಧಗಯಮ ಪ್ರಮುಖ್ ಪುರುಷೋತ್ತಮ ಶೆಟ್ಟಿ ವಾಮದಪದವು ಉಪಸ್ಥಿತರಿದ್ದರು.
