ಬಂಟ್ವಾಳ: ಮುಂಗಾರು ಮಳೆಯ ಕೊರತೆಯಿಂದ ಭತ್ತದ ಕೃಷಿಗೆ  ಹಿನ್ನಡೆಯಾಗಿರುವ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕನ್ನು ಪೂರ್ಣವಾಗಿ ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಹಾಗೂ ತಾಲೂಕಿನ ಎಲ್ಲ ಭತ್ತದ ಬೆಳೆಗಾರರಿಗೂ ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಬಂಟ್ವಾಳ ಮಂಡಲ ರೈತ ಮೋರ್ಚಾ ಸಮಿತಿ ಕೃಷಿ ಇಲಾಖೆಗೆ ಮನವಿ ಸಲ್ಲಿಸಿ ಆಗ್ರಹಿಸಿದೆ.


ರೈತ ಮೋರ್ಚಾ ಅಧ್ಯಕ್ಷ ಉಮೇಶ್ ಶೆಟ್ಟಿ ವಿಟ್ಲ ನೇತೃತ್ವದ ನಿಯೋಗ ಶನಿವಾರ  ಬಂಟ್ವಾಳ ತಾಲೂಕು ಕೃಷಿ ಅಧಿಕಾರಿಯ ನಂದನ್ ಶೆಣೈ ಅವರಿಗೆ ಮನವಿ ಸಲ್ಲಿಸಿ ಬಂಟ್ವಾಳ ತಾಲೂಕಿನಲ್ಲಿ ಮುಂಗಾರು ಮಳೆಯ ಕೊರತೆಯಿಂದ ಭತ್ತ ಕೃಷಿ ಮಾಡಿರುವ ರೈತರು ನೀರಿನ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಪ್ರದೇಶಗಳಲ್ಲಿ ಭತ್ತದ ಬೆಳೆ ಒಣಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಎರಡನೇ ಬೆಳೆ ಬೆಳೆಯಲು ಕೂಡ ಪೂರಕ ವಾತಾವರಣ ಕಂಡುಬರುತ್ತಿಲ್ಲ ಎಂದು ತಿಳಿಸಿದ್ದಾರೆ.


ಮಳೆ ಕೊರತೆ ಹಾಗೂ ಕೃಷಿ ಸಮಸ್ಯೆಗಳಿಂದಾಗಿ ತಾಲೂಕಿನಲ್ಲಿ ಭತ್ತ ಬೆಳೆಗಾರರ ಸಂಖ್ಯೆಯೂ ಇಳಿಮುಖವಾಗುತ್ತಿದ್ದು, ಕೃಷಿ ಇಲಾಖೆಯಿಂದ ತಾಲೂಕಿನ ಕೆಲವು ಗ್ರಾಮಗಳಲ್ಲಿ ಈಗಾಗಲೇ ಬೆಳೆ ಹಾನಿ ಪರಿಶೀಲನೆ ನಡೆಸಲಾಗಿದೆ. ಆದರೆ ಬರದ ಛಾಯೇ ಇಡೀ ತಾಲೂಕಿನಾದ್ಯಂತ ಕಂಡು ಬಂದಿರುವುದರಿಂದ ಎಲ್ಲಾ ಗ್ರಾಮಗಳಲ್ಲಿಯೂ ಸಮಗ್ರ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು ಮತ್ತು ಭತ್ತ ಬೆಳೆದಿರುವ ಅರ್ಹ ಎಲ್ಲಾ ರೈತರಿಗೂ ಸರ್ಕಾರದ ನಿಯಮಾನುಸಾರ ಪರಿಹಾರ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.


ರೈತರ ಮನವಿಗೆ ಸೂಕ್ತವಾಗಿ ಸ್ಪಂದಿಸಿ ಶೀಘ್ರ ಪರಿಹಾರ ಒದಗಿಸದಿದ್ದಲ್ಲಿ  ತಾಲೂಕಿನ ರೈತರನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತ ಮೋರ್ಚಾ ಮನವಿಯಲ್ಲಿ ಎಚ್ಚರಿಸಿದೆ.ಈ ಸಂದರ್ಭದಲ್ಲಿ ರೈತ ಮೋರ್ಛಾದ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ನಾವೂರು, ಹರೀಶ್ ಪ್ರಭು ಕಜೆಕಾರ್, ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ ಅಮ್ಟೂರು, ಮಾಧವ ಕರ್ಬೆಟ್ಟು ಹಾಗೂ ಕಾರ್ಯದರ್ಶಿ ಸುನಿಲ್ ರೋಡ್ರಿಗಸ್ ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *