ಬಂಟ್ವಾಳ: ಕರಾವಳಿ ಕರ್ನಾಟಕ ಭಾಗದಲ್ಲಿ ಕರ್ನಾಟಕ ಹೈಕೋರ್ಟ್‌ನ ಸರ್ಕ್ಯೂಟ್‌ ಬೆಂಚ್‌ ಅಥವಾ ಶಾಶ್ವತ ಪೀಠ ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸಲು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಸಮಿತಿ ರಚಿಸಿರುವುದನ್ನು  ವಕೀಲರ ಸಂಘದ ಅಧ್ಯಕ್ಷ ರಿಚಾಡ್೯ ಎಂ.ಕೋಸ್ತ ಸ್ವಾಗತಿಸಿದ್ದಾರೆ.

ಸೆ.29ರಂದು ಕರ್ನಾಟಕ ಹೈಕೋರ್ಟ್ ಹೊರಡಿಸಿರುವ ಅಧಿಸೂಚನೆಯಂತೆ, ಮಂಗಳೂರು ಸೇರಿದಂತೆ ಕರಾವಳಿ ಕರ್ನಾಟಕ ಪ್ರದೇಶ, ಮೈಸೂರು, ಕೊಡಗು–ಮಡಿಕೇರಿ, ಹಾಸನ, ದಾವಣಗೆರೆ ಹಾಗೂ ಉತ್ತರ ಕನ್ನಡ ಜಿಲ್ಲಾ ಕೇಂದ್ರಗಳಲ್ಲಿ ಹೈಕೋರ್ಟ್‌ನ ಸರ್ಕ್ಯೂಟ್‌ ಬೆಂಚ್‌ ಅಥವಾ ಶಾಶ್ವತ ಪೀಠ ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸಲು
ಹೈಕೋರ್ಟ್ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಅನು ಶಿವರಾಮನ್, ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಹಾಗೂ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಸಂಬಂಧಪಟ್ಟ ಎಲ್ಲ ಪಾಲುದಾರರ ಅಭಿಪ್ರಾಯಗಳನ್ನು ಪಡೆದು ಈ ಕುರಿತು ವರದಿ ಸಲ್ಲಿಸುವ ಜವಾಬ್ದಾರಿ ನೀಡುವ ನಿರೀಕ್ಷೆ ಇದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಹೈಕೋರ್ಟ್‌ನ ಪೀಠ ಸ್ಥಾಪನೆಯಾದಲ್ಲಿ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ಜನರಿಗೆ ನ್ಯಾಯಾಂಗ ಸೇವೆ ಇನ್ನಷ್ಟು ಸುಲಭವಾಗಿ ಲಭ್ಯವಾಗುವ ಸಾಧ್ಯತೆ ಇದೆ. ವಕೀಲರು ಹಾಗೂ ಕಕ್ಷಿದಾರರಿಗೂ ಸಮಯ ಮತ್ತು ಪ್ರಯಾಣದ ಹೊರೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆಯನ್ನು ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೈಕೋರ್ಟ್‌ನ ಈ ಅಧಿಸೂಚನೆಯನ್ನು ಸ್ವಾಗತಿಸಿರುವ  ವಕೀಲರ ಸಂಘದ ಜಿಲ್ಲಾಧ್ಯಕ್ಷ ಹಾಗೂ ಬಂಟ್ವಾಳ ತಾಲೂಕು ವಕೀಲರ ಸಂಘದ ಅಧ್ಯಕ್ಷ ರಿಚಾರ್ಡ್ ಕೋಸ್ತ ಎಂ  ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ಸಾಧ್ಯತೆಯನ್ನು ಪರಿಶೀಲಿಸಲು ಅಧಿಕೃತವಾಗಿ ಸಮಿತಿ ರಚಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದಾರೆ.
ಸಮಿತಿಯು ಸಂಬಂಧಪಟ್ಟ ವಕೀಲರ ಸಂಘಗಳು, ನ್ಯಾಯಾಂಗ ಕ್ಷೇತ್ರದ ಪ್ರತಿನಿಧಿಗಳು ಹಾಗೂ ಇತರ ಪಾಲುದಾರರ ಅಭಿಪ್ರಾಯಗಳನ್ನು ಪರಿಗಣಿಸಿ ವಾಸ್ತವಾಂಶಗಳ ಆಧಾರದಲ್ಲಿ ವರದಿ ಸಲ್ಲಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದ ನ್ಯಾಯಾಂಗ ವ್ಯವಸ್ಥೆಯ ಅಗತ್ಯತೆಗಳು, ಮೂಲಸೌಕರ್ಯ ಹಾಗೂ ಸಾರ್ವಜನಿಕರಿಗೆ ಆಗುವ ಅನುಕೂಲಗಳ ಕುರಿತು ಸಮಿತಿಗೆ ಸಮಗ್ರ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ವಕೀಲರ ಸಂಘವೂ ಸಹಕಾರ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *