ಬಂಟ್ವಾಳ: ವಿಶ್ವ ಹೃದಯ ದಿನದ ಪ್ರಯುಕ್ತ ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ ಹಾಗೂ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು ತುಂಬೆ ಇವರ ಸಂಯುಕ್ತಾಶ್ರಯದಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಕಚೇರಿಯ ಸಿಬ್ಬಂದಿಗಳಿಗೆ ಸಿಪಿಆರ್ (ಹೃದಯ-ಶ್ವಾಸಕೋಶ ಪುನಶ್ಚೇತನ) ಮತ್ತು ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮವನ್ನು ಮಂಗಳವಾರ ತಾ.ಪಂ.ನ ಎಸ್ ಜಿಎಸ್ ವೈ ಸಭಾಂಗಣದಲ್ಲಿ ಮಂಗಳವಾರ ನಡೆಸಲಾಯಿತು.

ಹೃದಯಾಘಾತ ಸೇರಿದಂತೆ ತುರ್ತು ಆರೋಗ್ಯ ಪರಿಸ್ಥಿತಿಗಳ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತಕ್ಷಣದ ಕ್ರಮಗಳು, ಸಿಪಿಆರ್ ನೀಡುವ ವಿಧಾನ ಹಾಗೂ ಪ್ರಥಮ ಚಿಕಿತ್ಸೆ ನೀಡುವ ಕುರಿತು ಸಿಬ್ಬಂದಿಗೆ ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ ನೀಡಲಾಯಿತಲ್ಲದೆ ಸಿಬ್ಬಂದಿಗಳಿಗೆ  ಪ್ರಾಯೋಗಿಕ ಅಭ್ಯಾಸಕ್ಕೂ ಅವಕಾಶ ಕಲ್ಪಿಸಲಾಯಿತು.
ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಮೂಳೆಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಉಜ್ವಲ್ ಸುವರ್ಣ ಅವರು ಪ್ರಥಮ ಚಿಕಿತ್ಸೆ ಕುರಿತು ತರಬೇತಿ ನೀಡಿದರು.

ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರೀನಾ ವಿಲ್ಮಾ ಫ್ರಾಂಕ್ ಅವರು ಹೃದಯಾಘಾತದಂತಹ ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ತುರ್ತು ಚಿಕಿತ್ಸೆಯ ಮೂಲಕ ವ್ಯಕ್ತಿಯ ಜೀವವನ್ನು ಹೇಗೆ   ರಕ್ಷಿಸಬಹುದು ಎಂಬುದರ ಕುರಿತು ಮಾಹಿತಿ ನೀಡಿದರು.
ಫಾದರ್ ಮುಲ್ಲರ್ ಆಸ್ಪತ್ರೆ ನರ್ಸಿಂಗ್ ವಿಭಾಗದ ಅಧೀಕ್ಷಕರಾದ  ಸಿಲ್ವಿಯಾ ನಿಶಾ ಲೋಬೋ, ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕರಾದ  ಜಾನೆಟ್ ಸಿಕ್ವೇರಾ, ಉಪನ್ಯಾಸಕರಾದ  ಸುಷ್ಮಾ, ಸೌಲಭ್ಯ ಸಂಯೋಜಕರಾದ  ಜೇಸನ್ ಕರ್ಕಡ ಹಾಗೂ ತ್ರಿವೇಣಿ ಅವರು ಉಪಸ್ಥಿತರಿದ್ದರು,


ಈ ಸಂದರ್ಭ ತಿಥಿಯಾಗಿ ಭಾಗವಹಿಸಿದ್ದಬಂಟ್ವಾಳ ತಾಲೂಕು ಪಂಚಾಯಿತ್ ನ ಸಹಾಯಕ ನಿರ್ದೇಶಕರಾದ ವಿಶ್ವನಾಥ್ ಅವರು ಮಾತನಾಡಿ,ತುರ್ತು ಸಂದರ್ಭಗಳಲ್ಲಿ ಸಮಯೋಚಿತವಾಗಿ ಸೂಕ್ತ ಪ್ರಥಮ ಚಿಕಿತ್ಸೆ ಹಾಗೂ ಸಿಪಿಆರ್ ನೀಡುವ ಮೂಲಕ ಅಮೂಲ್ಯ ಜೀವವನ್ನು ಉಳಿಸಲು ಸಾಧ್ಯವಾಗುತ್ತದೆ. ಸಾರ್ವಜನಿಕ ಸೇವೆಯಲ್ಲಿರುವ ಸಿಬ್ಬಂದಿಗಳಿಗೆ ಇಂತಹ ತರಬೇತಿ ಕಾರ್ಯಕ್ರಮಗಳು ಅತ್ಯಂತ ಉಪಯುಕ್ತವಾಗಿದ್ದು, ಪ್ರತಿಯೊಬ್ಬರೂ ಸಿಪಿಆರ್ ಹಾಗೂ ಪ್ರಥಮ ಚಿಕಿತ್ಸೆಯ ಕುರಿತು ಮೂಲಭೂತ ತರಬೇತಿ ಹೊಂದಿರುವುದು ಅಗತ್ಯವಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣ ಸ್ಪಂದಿಸಿ, ಜೀವ ಉಳಿಸಲು ಅಗತ್ಯವಾದ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಈ ತರಬೇತಿ ಸಹಕಾರಿಯಾಗಿದೆ ಎಂದರು.

By Suddi9

Leave a Reply

Your email address will not be published. Required fields are marked *