ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಕಬಡ್ಡಿ ಕ್ರೀಡೆಯ ಬೆಳವಣಿಗೆ, ನಿಯಮಾವಳಿ ಹಾಗೂ ತೀರ್ಪುಗಾರಿಕೆಯ ವಿವಿಧ ವಿಚಾರಗಳ ಕುರಿತು ಚರ್ಚಿಸುವ ಉದ್ದೇಶದಿಂದ ಜಿಲ್ಲಾ ಕಬ್ಬಡ್ಡಿ ಸಂಘಟಕರು, ಆಟಗಾರರು ಹಾಗೂ ತೀರ್ಪುಗಾರರ ಸಮ್ಮಿಲನ ಮತ್ತು ಕಾರ್ಯಾಗಾರವು  ಬಿ.ಸಿ.ರೋಡ್‌ನಲ್ಲಿರುವ ಸರಕಾರಿ ನೌಕರರ ಸಭಾಭವನದಲ್ಲಿ ಭಾನುವಾರ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬ್ಬಡ್ಡಿ ಅಸೋಸಿಯೇಷನ್‌ ಮಾರ್ಗದರ್ಶನದಲ್ಲಿ ಬಂಟ್ವಾಳ ತಾಲೂಕು ಅಮೆಚೂರ್ ಕಬ್ಬಡ್ಡಿ ಅಸೋಸಿಯೇಷನ್‌ ಆಶ್ರಯದಲ್ಲಿ ಈ ಕಾರ್ಯಾಗಾರ ನಡೆಯಿತು.
ತಾಲೂಕು ಅಸೋಸಿಯೇಷನ್‌ ಅಧ್ಯಕ್ಷ ಪುಷ್ಪರಾಜ್ ಚೌಟ ಅವರ ಅಧ್ಯಕ್ಷತೆ ವಹಿಸಿ ಮಾತನಾಡಿ,ಗ್ರಾಮೀಣ ಭಾಗದಲ್ಲಿ ಕಬಡ್ಡಿ ಆಟಗಾರರು ಇನ್ನಷ್ಟು ಉದಯವಾಗಬೇಕು ಮತ್ತು ರಾಜ್ಯ ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿಯು ಬೆಳೆಯಬೇಕು ಎಂಬುದು ಆಶಯವಾಗಿದ್ದು, ಅಸೋಸಿಯೇಷನ್ ನ ನೀತಿ,ನಿಯಮಗಳನ್ನು ಪಾಲಿಸಿಕೊಂಡು ಕಬಡ್ಡಿಯನ್ನು ಪ್ರೋತ್ಸಾಹಿಸುವಂತೆ ಕರೆ ನೀಡಿದರು.


ಪ್ರಧಾನ ಕಾರ್ಯದರ್ಶಿ ಫ್ರಾನ್ಸಿಸ್ ವಿ.ವಿ., ಗೌರವ ಸಲಹೆಗಾರರಾದ ಪುರುಷೋತ್ತಮ ಪೂಜಾರಿ, ರತನ್ ಶೆಟ್ಟಿ ಹಾಗೂ ಜಿಲ್ಲಾ ತೀರ್ಪುಗಾರರ ಮಂಡಳಿಯ ಮಾಜಿ ಸಂಚಾಲಕ ಕೃಷ್ಣಪ್ಪ ಬಂಗೇರ, ರಾಜ್ಯ ತೀರ್ಪಗಾರರ ಮಂಡಳಿ ಸಂಚಾಲಕ ಪ್ರಭಾಕರ ನಾರಾವಿ, ತಾಲೂಕು ಅಸೋಸಿಯೇಷನ್ ಗೌರವಾಧ್ಯಕ್ಷ ಬೇಬಿ ಕುಂದರ್ ,ತಾಲೂಕು ಅಸೋಸಿಯೇಶನ್ ಉಪಾಧ್ಯಕ್ಷ ನಾಗೇಶ್ ಶಂಭೂರ್, ತಾಲೂಕು ತೀರ್ಪುಗಾರರ ಮಂಡಳಿ ಸಂಚಾಲಕ ಹಬೀಬ್ ಮಾಣಿ ಉಪಸ್ಥಿತರಿದ್ದರು.
 
ರಾಷ್ಟ್ರೀಯ ಕಬ್ಬಡ್ಡಿ ತೀರ್ಪುಗಾರ ಕೃಷ್ಣಾನಂದ ರಾವ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಕಬ್ಬಡ್ಡಿ ಕ್ರೀಡೆಯ ನೂತನ ನಿಯಮಾವಳಿ, ತೀರ್ಪುಗಾರಿಕೆಯ ವಿಧಾನ, ಪಂದ್ಯದ ನಿರ್ವಹಣೆ ಹಾಗೂ ತೀರ್ಪುಗಾರರು ಗಮನಿಸಬೇಕಾದ ಪ್ರಮುಖ ಅಂಶಗಳ ಕುರಿತು ಮಾಹಿತಿ ನೀಡಿದರು.


ಕಬಡ್ಡಿಯ ಬೆಳವಣಿಗೆ, ಪಂದ್ಯ ಆಯೋಜನೆ, ಆಟಗಾರರ ಶಿಸ್ತು, ತೀರ್ಪುಗಾರಿಕೆಯ ಗುಣಮಟ್ಟ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು. ಜಿಲ್ಲೆಯ ವಿವಿಧ ಭಾಗಗಳ ಕಬಡ್ಡಿ ತೀರ್ಪುಗಾರರು, ಆಟಗಾರರು, ತಂಡಗಳ ವ್ಯವಸ್ಥಾಪಕರು ಹಾಗೂ ಪಂದ್ಯ ಆಯೋಜಕರು ಭಾಗವಹಿಸಿದ್ದರು.

ತೀರ್ಪುಗಾರರ ಮಂಡಳಿ ಅಧ್ಯಕ್ಷ ಸುರೇಶ್ ಮೈರಡ್ಕ  ಸ್ವಾಗತಿಸಿದರು. ದೀಪಕ್ ಪೆರಾಜೆ ವಂದಿಸಿದರು.
ಪುರುಷೋತ್ತಮ ಕೋಲ್ಪೆ ಕಾರ್ಯಕ್ರಮ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *