ಬಂಟ್ವಾಳ: ಇಲ್ಲಿಯ ತಾಲೂಕಿನಲ್ಲಿ 2026 ನೇ ಮುಂಗಾರು ಅವಧಿಯಲ್ಲಿ ಉಂಟಾದ ಬರ ಪರಿಸ್ಥಿತಿ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಏಳು ಗ್ರಾಮಗಳಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ  85.3 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿಯಾಗಿರುವ ಅಂಶ ಬಹಿರಂಗಗೊಂಡಿದೆ.,.
ತಾಲೂಕಿನ ಅಜ್ಜಿಬೆಟ್ಟು, ಕಾವಳಪಡೂರು, ಸಜೀಪಮೂಡ, ಬಾಳ್ತಿಲ, ತುಂಬೆ, ಕರಿಯಂಗಳ ಹಾಗೂ ಕೇಪು ಗ್ರಾಮಗಳಲ್ಲಿ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಗ್ರೌಂಡ್ ಟ್ರೂಥಿಂಗ್ (ಜಿ.ಟಿ.) ಬೆಳೆ ಹಾನಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ್ದಾರೆ.


ಬಂಟ್ವಾಳ ತಾಲೂಕಿನಲ್ಲಿ ಒಟ್ಟು ಸುಮಾರು 1,590 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಈ ಪೈಕಿ ಜಂಟಿ ಸಮೀಕ್ಷೆ ನಡೆಸಿದ ಪ್ರದೇಶದಲ್ಲಿ ಶೇ.33ರಿಂದ ಶೇ.50ರ ವರೆಗೆ ಬೆಳೆ ಹಾನಿಯಾಗಿರುವ ಕುರಿತು ವರದಿ ನೀಡಲಾಗಿದೆ. ಸರ್ಕಾರದ ನಿಯಮಾನುಸಾರ ಒಂದು ಹೆಕ್ಟೇರ್ ಭತ್ತದ ಬೆಳೆಗೆ  8500 ಸಾ.ರೂ.ವಿನಂತೆ  ಪರಿಹಾರ ಲೆಕ್ಕ ಹಾಕಲಾಗಿದ್ದು, ಒಟ್ಟು 1.35 ಕೋಟಿ ರೂ. ಪರಿಹಾರ ಮೊತ್ತದ ನಿರೀಕ್ಷೆಯನ್ನಿರಿಸಿಕೊಂಡು  ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆಸರ್ಕಾರದ ಮುಂದಿನ ಕ್ರಮದ ಬಳಿಕ ಅರ್ಹ ರೈತರಿಗೆ ನಿಯಮಾನುಸಾರ ಬೆಳೆ ಹಾನಿ ಪರಿಹಾರ ದೊರೆಯುವ ನಿರೀಕ್ಷೆಯಿದೆ.


ಬೆಳೆ ಸಮೀಕ್ಷೆ ದಾಖಲೆ ಮುಖ್ಯ:
ಮುಂಗಾರು ಅವಧಿಯಲ್ಲಿ ನಡೆದ ಬೆಳೆ ಸಮೀಕ್ಷೆಯಲ್ಲಿ ರೈತರ ಜಮೀನಿನಲ್ಲಿ ‘ಭತ್ತ’ ಎಂದು ಬೆಳೆ ನಮೂದಾಗಿರುವುದು ಕಡ್ಡಾಯವಾಗಿದ್ದು, ಅಂತಹ ದಾಖಲೆ ಹೊಂದಿರುವ ಜಮೀನುಗಳನ್ನು ಮಾತ್ರ ಬೆಳೆ ಹಾನಿ ಪರಿಹಾರಕ್ಕೆ ಪರಿಗಣಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ರೈತರು ತಮ್ಮ ಬೆಳೆ ಸಮೀಕ್ಷೆ ಹಾಗೂ ಸಂಬಂಧಿತ ದಾಖಲೆಗಳಲ್ಲಿ ಬೆಳೆ ವಿವರ ಸರಿಯಾಗಿ ನಮೂದಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ ಎಮನದು ಕೃಷಿ ಇಲಾಖಾ ಪ್ರಕಟಣೆ ತಿಳಿಸಿದೆ..
ಜಂಟಿ ಸಮೀಕ್ಷೆಯಲ್ಲಿ ತಹಶೀಲ್ದಾರ್ ಮಂಜುನಾಥ್, ಕೃಷಿ ಅಧಿಕಾರಿ ನಂದನ್ ಶೆಣೈ, ಗ್ರಾಮ ಆಡಳಿತಾಧಿಕಾರಿಗಳಾದ ಸಂಪತ್, ಸ್ವಾತಿ, ಮಲ್ಲಿಕಾರ್ಜುನ, ಪ್ರಶಾಂತ್ ಹಾಗೂ ವಿನುತ, ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕಾ ಅಧಿಕಾರಿ ಹರೀಶ್ ಉಪಸ್ಥಿತರಿದ್ದರು. 

By Suddi9

Leave a Reply

Your email address will not be published. Required fields are marked *