ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲಬೆರಕೆ ರಹಿತ ಹಾಗೂ ಗುಣಮಟ್ಟದ ಹಾಲು ಉತ್ಪಾದನೆಗೆ ಜಿಲ್ಲಾ ಹಾಲು ಒಕ್ಕೂಟ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಜಿಲ್ಲೆಯ ಜನರ ಬೇಡಿಕೆಯನ್ನು ಪೂರೈಸುವಷ್ಟು ಹಾಲು ಉತ್ಪಾದಿಸುವ ಸಾಮರ್ಥ್ಯವನ್ನು ಜಿಲ್ಲೆ ಹೊಂದಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.

ಗುಡ್ಡೆಯಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ವಿಸ್ತರಣಾ ಕಟ್ಟಡ ಉದ್ಘಾಟನೆ ಹಾಗೂ ರಜತ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೈನುಗಾರಿಕೆ ಕ್ಷೇತ್ರಕ್ಕೆ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕ ವ್ಯವಸ್ಥೆಯಲ್ಲಿ ಕೃಷಿ ಮತ್ತು ಕೃಷಿ ಆಧಾರಿತ ಚಟುವಟಿಕೆಗಳಿಗೆ ಮಹತ್ವದ ಸ್ಥಾನವಿದೆ. ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕು. ಕೃಷಿಕರು ಜಿಲ್ಲೆಯ ಜೀವಾಳವಾಗಿದ್ದು, ಸಹಕಾರ ಕ್ಷೇತ್ರವು ಅವರ ಬದುಕಿಗೆ ಬೆಂಬಲವಾಗಿ ನಿಂತಿರುವುದು ವಿಶೇಷವಾಗಿದೆ ಎಂದು ಅವರು ಹೇಳಿದರು.


*ಹೈನುಗಾರರೇ ಸಂಘದ ದೊಡ್ಡ ಶಕ್ತಿ*ಕಾರ್ಯಕ್ರಮವನ್ನು ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಮಾತನಾಡಿ, ಹಾಲು ಉತ್ಪಾದಕರೇ ಸಂಘದ ಬಹುದೊಡ್ಡ ಶಕ್ತಿಯಾಗಿದ್ದಾರೆ. ಕರಾವಳಿ ಭಾಗದಲ್ಲಿ ಹಾಲು ಉತ್ಪಾದನೆ ಮಾಡುವುದು ಹಲವು ಸವಾಲುಗಳ ನಡುವೆಯೇ ಸಾಧ್ಯವಾಗುತ್ತಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಹೈನುಗಾರಿಕೆಗೆ ಒತ್ತು ನೀಡಿ ಯಶಸ್ಸು ಸಾಧಿಸುತ್ತಿರುವ ಜಿಲ್ಲೆಯ ಕೃಷಿಕರ ಸೇವೆ ಅಭಿನಂದನೀಯ ಎಂದರು.


ರೈತರಿಗೆ ಹಾಲಿನ ದರ ಹೆಚ್ಚಿಸುವ ಕುರಿತು ಶೀಘ್ರದಲ್ಲೇ ಅನುಕೂಲಕರ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿದ್ದು, ಈ ನಿಟ್ಟಿನಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ. ಕ. ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ನಂದರಾಮ ರೈ ಮಾತನಾಡಿ, ಗುಡ್ಡೆಯಂಗಡಿ ಭಾಗದ ಹೈನುಗಾರರ ಪ್ರಾಮಾಣಿಕ ಸೇವೆ ಹಾಗೂ ಸಂಘದ ಹಿರಿಯರ ಪರಿಶ್ರಮದ ಫಲವಾಗಿ ಸಂಸ್ಥೆ ರಜತ ಸಂಭ್ರಮ ಆಚರಿಸುವಂತಾಗಿದೆ. ಮುಂದಿನ ದಿನಗಳಲ್ಲೂ ಹಾಲು ಉತ್ಪಾದಕರ ಸಹಕಾರ ಸಂಘದ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.


ಹಾಲು ಒಕ್ಕೂಟದ ಉಪಾಧ್ಯಕ್ಷ ಉದಯ ಎಸ್. ಕೋಟ್ಯಾನ್, ನಿರ್ದೇಶಕರಾದ ಸುಚರಿತ ಶೆಟ್ಟಿ, ಬಿ. ಸುಧಾಕರ ರೈ ಹಾಗೂ ಸವಿತಾ ಎನ್. ಶೆಟ್ಟಿ ಮಾತನಾಡಿ ಶುಭ ಹಾರೈಸಿದರು.ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ರವಿರಾಜ್ ಉಡುಪ, ಗುಡ್ಡೆಯಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಸುಂದರ ಶೆಟ್ಟಿ,  ವಿಸ್ತರಣಾಧಿಕಾರಿ ಸುಚಿತ್ರ ಉಪಸ್ಥಿತರಿದ್ದರು.


ಈ ಸಂದರ್ಭ ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಅವರನ್ನು ಗೌರವಿಸಲಾಯಿತು.
ಸಂಘಕ್ಕೆ ಹಲವಾರು ವರ್ಷಗಳಿಂದ ಹಾಲು ಪೂರೈಸುತ್ತಿದ್ದ ಹಿರಿಯ ಸದಸ್ಯ ಸುಲೈಮಾನ್  ಹಾಗೂ
ಗುಡ್ಡೆಯಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷರು, ಹಾಲಿ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸಂಘದ ಬೆಳವಣಿಗೆಗೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು.

ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸುವ ಮೂವರು ಕೃಷಿಕರನ್ನು  ಹಾಗೂ ವಿಶೇಷ ಸಾಧನೆಗೈದ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.ಕಾರ್ಯನಿರ್ವಹಣಾಧಿಕಾರಿ ಸುಶ್ಮಿತಾ ಸ್ವಾಗತಿಸಿ,ದ.ಕ. ಹಾಲು ಒಕ್ಕೂಟದ ಉಪವ್ಯವಸ್ಥಾಪಕಿ ಜಾನೆಟ್ ರೊಸಾರಿಯೋ ವಂದಿಸಿದರು. ಪ್ರಾಂಶುಪಾಲ ಮಹೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *