ಬಂಟ್ವಾಳ:ಮಂಗಳೂರು ಗ್ರಾಮಾಂತರ ಜಿಲ್ಲೆ ಬಂಟ್ವಾಳ ಪ್ರಖಂಡದ ವಿಶ್ವ ಹಿಂದೂ ಪರಿಷತ್–ಬಜರಂಗದಳ ಶ್ರೀ ದುರ್ಗಾ ಶಾಖೆ ಕಾಡಬೆಟ್ಟು ಇದರ ವತಿಯಿಂದ ಗಣೇಶ ಚತುರ್ಥಿ ಪ್ರಯುಕ್ತ ಉಚಿತ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು.
ರಾ.ಸ್ವ.ಸೇ.ಸಂಘದ ಹಿರಿಯರಾದ ಕಲ್ಲಡ್ಕ ಪ್ರಭಾಕರ ಭಟ್ ಅಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದರು. ಬಂಟ್ವಾಳ ಪ್ರಖಂಡ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪ್ರಸಾದ್ ಕುಮಾರ್ ರೈ ಉಪಸ್ಥಿತರಿದ್ದರು.

‘ಸೇವಾ–ಸುರಕ್ಷಾ–ಸಂಸ್ಕಾರ’ ಎಂಬ ಧ್ಯೇಯವಾಕ್ಯದೊಂದಿಗೆ ಸಾರ್ವಜನಿಕರಿಗೆ, ವಿಶೇಷವಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಉದ್ದೇಶದಿಂದ ಈ ಸೇವೆಯನ್ನು ಆರಂಭಿಸಲಾಗಿದೆ. ಗಣೇಶ ಚತುರ್ಥಿ ದಿನ ನಡೆದ ಕಾರ್ಯಕ್ರಮದಲ್ಲಿ ಹುಲಿ ವೇಷದ ಊದು ಪೂಜೆಯೊಂದಿಗೆ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು.
ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸ್ವರ್ಣ ಸಂಜೀವಿನಿ ಸೇವಾ ಸಂಘ (ರಿ.), ಮಡವು; ಯುವಶಕ್ತಿ (ರಿ.), ಕಡೆಶಿವಾಲಯ ಹಾಗೂ ಭಜರಂಗದಳ ಸೇವಾ ಬ್ರಿಗೇಡ್, ಎಡಪದವು ಇವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಸಚಿನ್ ಮೆಲ್ಕಾರ್, ಲೋಹಿತ್ ಪಣೋಲಿಬೈಲ್, ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ಸಂದೇಶ್ ಕಾಡಬೆಟ್ಟು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
