ಬಂಟ್ವಾಳ: ಹಲವು ದಶಕಗಳ ಕಾಲ ತನ್ನ ಚಹದ ಸ್ವಾದ ಹಾಗೂ ರುಚಿ ಹಾಗೂ ತಾಜಾ ತಿನಿಸುಗಳಿಂದ ಮನೆಮಾತಾಗಿದ್ದ ಬಿ.ಸಿ.ರೋಡಿನ ಪ್ರಸಿದ್ಧ ಪ್ರಣಾಮ್ ಹೋಟೆಲ್ ಮಾಲೀಕ ಶಿವರಾವ್ (80) ಬೆಂಗಳೂರಿನ ಪುತ್ರನ ಮನೆಯಲ್ಲಿ ಬುಧವಾರ ರಾತ್ರಿ ನಿಧನ ಹೊಂದಿದ್ದಾರೆ.

ಅವರು ಪುತ್ರ ಮತ್ತು ಪುತ್ರಿ ಅಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಕೆಲ ದಶಕಗಳ ಹಿಂದೆ ಬಿ.ಸಿ.ರೋಡಿನಲ್ಲಿ ಪ್ರಣಾಮ್ ಎಂಬ ಹೋಟೆಲ್ ಸ್ಥಾಪಿಸಿ ಮುನ್ನಡೆಸಿದ್ದ ಅವರು ಕೆಲ ವರ್ಷಗಳ ಮೊದಲು ಅದನ್ನು ನಿಲುಗಡೆಗೊಳಿಸಿ ವಿಶ್ರಾಂತ ಜೀವನ ನಡೆಸುತ್ತಿದ್ದರು.
ಅವರ ಹೋಟೆಲ್ ನ ಚಹ ಮತ್ತು ತಾಜಾ ತಿನಿಸುಗಳು ಮನೆಮಾತಾಗಿದ್ದವು. ಬಿ.ಸಿ.ರೋಡಿನ ಚಂಡಿಕಾಪರಮೇಶ್ವರಿ ದೇವಸ್ಥಾನ ಸಹಿತ ಹಲವು ಕಡೆಗಳಲ್ಲಿ ಭಜನಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಶಿವರಾಯರು ಸಂಗೀತ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.
