ಬಂಟ್ವಾಳ;  ಗತಕಾಲದ ಸಾಂಪ್ರದಾಯಿಕ ಆಚರಣೆಗಳನ್ನು ಕಣ್ಣಾರೆ ಕಂಡು, ಅವುಗಳ ಮಹತ್ವವನ್ನು ಅರಿತು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಹಮ್ಮಿಕೊಂಡಿರುವ ‘ಚೌತಿ ಚಿತ್ತಾರ’ ಕಾರ್ಯಕ್ರಮವು ಲೋಕೇಶ್ ಬಂಗೇರ ಪಳ್ಳತ್ತಿರ ಅವರ ಮನೆಯಲ್ಲಿ  ನಡೆಯಿತು.

ಈ ಸಂದರ್ಭ ಮಾತನಾಡಿದ ಲೋಕೇಶ್ ಬಂಗೇರ ಅವರು, ಹಿಂದಿನ ಕಾಲದ ಸಾಂಪ್ರದಾಯಿಕ ಆಚರಣೆಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸುವ ಯುವವಾಹಿನಿಯ ಪ್ರಯತ್ನ ಶ್ಲಾಘನೀಯವಾಗಿದೆ. ಇಂತಹ ವಿನೂತನ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಅವುಗಳ ಮಹತ್ವವನ್ನು ತಿಳಿಸುವಲ್ಲಿ ಸಮಾಜಕ್ಕೆ ಮಾದರಿಯಾಗಲಿವೆ ಎಂದು ಹೇಳಿದರು.
ಯುವವಾಹಿನಿ (ರಿ.) ವಿಟ್ಲ ಘಟಕದ ಕಾರ್ಯದರ್ಶಿ ಧನಲಕ್ಷ್ಮಿ ರಾಜೇಶ್ ಅವರು ಚೌತಿ ಚಿತ್ತಾರದ ಉದ್ದೇಶವನ್ನು ವಿವರಿಸಿ, ಗಣಪತಿಯ ಸ್ವರೂಪ, ಗಣಪತಿ ಆರಾಧನೆಯ ಮಹತ್ವ, ತುಳಸಿ ಕಟ್ಟೆಯ ಬಳಿ ಗಣಪತಿಯನ್ನು ಪ್ರತಿಷ್ಠಾಪಿಸುವ ಸಂಪ್ರದಾಯ ಹಾಗೂ ಗಣಪತಿಗೆ ಸಲ್ಲಿಸುವ ಸ್ತುತಿ ಮತ್ತು ನೈವೇದ್ಯಗಳ ಕುರಿತು ಮಾಹಿತಿ ನೀಡಿದರು.
ಯಾವುದೇ ಶುಭಕಾರ್ಯಕ್ಕೂ ಮುನ್ನ ಗಣಪತಿಗೆ ಮೊದಲ ಸ್ಥಾನ ನೀಡುವ ಕಾರಣವನ್ನೂ ವಿವರಿಸಿದ ಅವರು, ಆಚರಣೆಗಳ ಹಿಂದಿರುವ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ತಿಳಿಸಿದರು.
ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷ ಗಣೇಶ್ ಪಡಾಜೆ ಅವರು ಮಾತನಾಡಿ, ಸಾಂಪ್ರದಾಯಿಕ ಆಚರಣೆಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಕಣ್ಣಾರೆ ನೋಡುವುದರಿಂದ ಅವುಗಳ ಬಗ್ಗೆ ಇಂದಿನ ಪೀಳಿಗೆಗೆ ತಿಳುವಳಿಕೆ ಮೂಡಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ಮಾಜಿ ಅಧ್ಯಕ್ಷ ರಮೇಶ್ ಪೂಜಾರಿ ಮುಜಾಲ, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು,  ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಸ್ವಾಗತಿಸಿದರು. ಕೋಶಾಧಿಕಾರಿ ಡಾ. ತ್ರಿವೇಣಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಸುಜಿತ್ ಅಂಚನ್ ವಂದಿಸಿದರು. 

By Suddi9

Leave a Reply

Your email address will not be published. Required fields are marked *