ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಮಂದಿರದ 94ನೇ ವರ್ಷದ ಮೊಸರು ಕುಡಿಕೆ ಉತ್ಸವವು ಶನಿವಾರ ಸಂಜೆ ಸಂಭ್ರಮ, ಸಡಗರದಿಂದ ನಡೆಯಿತು. ಶ್ರೀರಾಮಾಂಜನೇಯ ಸೇವಾ ಟ್ರಸ್ಟ್‌ನ ಅಧ್ಯಕ್ಷ ಡಾ. ಕೆ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಮೊಸರು ಕುಡಿಕೆಯ ಶೋಭಾಯಾತ್ರೆಗೆ ಚಾಲನೆ ನೀಡಿದರು.

ಈ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಭೇಟಿ ನೀಡಿ ಉತ್ಸವದ ಸಂಭ್ರಮದಲ್ಲಿ ಪಾಲ್ಗೊಂಡರು. ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಮಾಜಿ ಶಾಸಕರಾದ ರುಕ್ಕಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಕಾರ್ಯದರ್ಶಿ ನಾಗೇಶ್ ಕಲ್ಲಡ್ಕ ಶ್ರೀರಾಮ ಮಂದಿರ ಆಡಳಿತ ಸಮಿತಿ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಕಾರ್ಯದರ್ಶಿ ಕ.
ಕೃಷ್ಣಪ್ಪ, ಉತ್ಸವ ಸಮಿತಿ ಅಧ್ಯಕ್ಷ ಪುಷ್ಪರಾಜಶೆಟ್ಟಿಗಾರ್, ಕಾರ್ಯದರ್ಶಿ ಸುಜಿತ್ ಕೊಟ್ಟಾರಿ, ಶ್ರೀರಾಮ ಭಜನಾ ಮಂದಿರದ ಭಜನಾ ಸಮಿತಿ ಅಧ್ಯಕ್ಷ ಹರೀಶ್ ಆಚಾರ್ಯ, ಕಾರ್ಯದರ್ಶಿ ಉತ್ತಮ ಕುಮಾರ್ ಪಳನೀರು ಸಹಿತ ವಿವಿಧ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.

ಶ್ರೀರಾಮ ವಿದ್ಯಾಕೇಂದ್ರದ ಮಕ್ಕಳು ರಾಧೆ-ಕೃಷ್ಣವೇಷಧರಿಸಿ ತಾಯಂದಿರೊಂದಿಗೆ ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿ ಗಮನಸೆಳೆದರು.
ಶ್ರೀಕೃಷ್ಣದೇವರ ಛಾಯಾಚಿತ್ರವಿದ್ದ ಪಲ್ಲಕ್ಕಿಯನ್ನು ಕಾರ್ಯಕರ್ತರು ಭುಜ ಸೇವೆಯ ಮೂಲಕ ಹೊತ್ತುಕೊಂಡು ಸಾಗಿದರು.
ಶಿಲ್ಪಗೊಂಬೆ ಬಳಗ, ಡೊಳ್ಳು ಕುಣಿತ, ಭಜನೆ, ಬ್ಯಾಂಡ್, ವಿವಿಧ ವಾದ್ಯಮೇಳ, ನಾಸಿಕ್ ಬ್ಯಾಂಡ್, ಭಾರತ ಮಾತೆಯ ರೂಪಕ ಹಾಗೂ ವಿವಿಧ ಸ್ತಬ್ಧಚಿತ್ರಗಳು ಮೆರವಣಿಗೆಗೆ ಮೆರುಗು ನೀಡಿದವು.
ಶ್ರೀರಾಮ ರಿಕ್ಷಾ ಪಾರ್ಕ್ ಮೇಲಿನ ಪೇಟೆ, ಕೋಟಿ ಚೆನ್ನಯ್ಯ ರಿಕ್ಷಾ ಪಾರ್ಕ್, ನಿಟಿಲಾಕ್ಷ ರಿಕ್ಷಾ ಪಾರ್ಕ್, ಓಂಶಕ್ತಿ ಫ್ರೆಂಡ್ಸ್, ಚಕ್ರವರ್ತಿ ಫ್ರೆಂಡ್ಸ್ ಕಲ್ಲಡ್ಕ ವಜ್ರಕಾಯ ಫ್ರೆಂಡ್ಸ್ ಕಲ್ಲಡ್ಕ ಹಾಗೂ ರಾಮನಗರ ಬಾಯ್ಸ್ ಸೇರಿದಂತೆ ವಿವಿಧ ಸಂಘಟನೆಗಳು ನಿರ್ಮಿಸಿದ್ದ ಮಡಕೆನ್ನು ಪಿರಮಿಡ್ ರಚಿಸಿ ಯುವಕರು ಒಡೆದು ಸಂಭ್ರಮಿಸಿದರು.
ಶೋಭಾಯಾತ್ರೆಯಲ್ಲಿ ಪಾಲ್ಗೊಂಡವರಿಗೆ ನಾಗಸುಜ್ಞಾನ ಫ್ರೆಂಡ್ಸ್ ಹಾಗೂ ತುಡಾರ್ ಫ್ರೆಂಡ್ಸ್ ಕೊಳಕೀರು ಸಂಸ್ಥೆಯು ಪಾನೀಯದ ವ್ಯವಸ್ಥೆ ಮಾಡಿತ್ತು.
ಶೋಭಾಯಾತ್ರೆ ಮತ್ತು ಮೊಸರು ಕುಡಿಕೆ ಉತ್ಸವದಲ್ಲಿ ಜನಸಾಗರವೇ ನೆರೆದು ಸಂಭ್ರಮಿಸಿತು.
