ಬಂಟ್ವಾಳ:ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ದೇಶಭಕ್ತಿಯನ್ನು ಬೆಳೆಸುವ ಸ್ಕೌಟ್ಸ್ ಮತ್ತು ಗೈಡ್ಸ್ ಕ್ಲಬ್ ಗಳನ್ನು ಎಲ್ಲಾ ಶಾಲೆಗಳಲ್ಲಿಯೂ ಕಡ್ಡಾಯಗೊಳಿಸಬೇಕು ವಿದ್ಯಾರ್ಥಿಗಳಲ್ಲಿ ಪಠ್ಯದೊಂದಿಗೆ ಸಹ ಚಟುವಟಿಕೆ ಹಾಗೂ ವ್ಯಕ್ತಿತ್ವ ವಿಕಾಸವನ್ನು ಮಾಡುವುದಕ್ಕೆ ಸಹಕಾರಿಯಾಗುತ್ತದೆ ಎಂದು ವಿದ್ಯಾನಿಕೇತನ ವಿದ್ಯಾಸಂಸ್ಥೆಯ ಆಡಳಿತ ಟ್ರಸ್ಟಿ ಬಿ. ಸುರೇಶ ವಿ. ಬಾಳಿಗ ಹೇಳಿದರು.

ಬಂಟ್ವಾಳ ಎಸ್ವಿಎಸ್ ದೇವಳ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲಾ ಹಾಗೂ ಕಾಲೇಜು ಉಪನ್ಯಾಸಕರಿಗಾಗಿ ಏರ್ಪಡಿಸಲಾದ ಸ್ಕೌಟ್ ಗೈಡ್ಸ್ ,ಕಬ್ ಬುಲ್ಬುಲ್, ರೋವರ್ ರೇಂಜರ್ ನಡೆಸುವ ಬಗ್ಗೆ ಶಿಕ್ಷಕರಿಗಾಗಿ ಏರ್ಪಡಿಸಲಾದ ಕಾರ್ಯಾಗಾರದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಜಿಲ್ಲಾ ಆಯುಕ್ತರಾದ ಮಹಮ್ಮದ್ ತುಂಬೆ, ಕಾರ್ಯದರ್ಶಿಯಾದ ಡಾ.ಪ್ರತಿಮ್ ಕುಮಾರ್ ಸ್ಕೌಟ್ಸ್ ಚಳುವಳಿಯ ಬಗ್ಗೆ ಮತ್ತು ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕರು ಸ್ವವ್ಯಕ್ತಿತ್ವವನ್ನು ಬೆಳೆಸಿಕೊಂಡು ಸೇವಾ ಮನೋಭಾವದಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಬೇಕು ಎಂದರು.
ಎಸ್ಸಿಐ ತರಬೇತುದಾರರಾದ ಜಯಾನಂದ ಪೆರಾಜೆ ವ್ಯಕ್ತಿತ್ವ ವಿಕಸನ ತರಬೇತಿ ನೀಡಿದರು. ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾದ್ಯಾಯಿನಿ ಸುರೇಖಾ ಕೆ. ಸ್ವಾಗತಿಸಿದರು. ಆಡಳಿತ ಮಂಡಳಿ ಸದಸ್ಯ ಸುಬ್ರಾಯ ನಾಯಕ್ ಉಪಸ್ಥಿತರಿದ್ದರು. ಸಂದೇಶ್ ಬಾಳಿಗ , ಅಲೆನ್ ಡೊನಾಲ್ಡ್ ಸಹಕರಿಸಿದರು. ಶಿಕ್ಷಕಿ ವೀಣಾ ವಂದಿಸಿದರು.
