ಮುಂಬಯಿ: ಕಾಂದಿವಿಲಿ ಪಶ್ಚಿಮದ ಬಾಬ್ರೆಕರ್ ನಗರ್‌ಅ ಪರಿನೀ ಎಸ್ಸೆನ್ಸ್ ಅಪಾರ್ಟ್‌ನಲ್ಲಿನ ತುಳು ಕನ್ನಡ ಮತ್ತು ಮರಾಠಿಯರ ಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಹಿರಿಯ ರಂಗ ಕಲಾವಿದೆ ಚಂದ್ರಪ್ರಭಾ ಸುಧಾಕರ ಉದ್ಯಾವರ (81.) ವೃದ್ಧಾಪ್ಯ ಸಹಜತೆಯಿಂದ ಕಳೆದ ಮಂಗಳವಾರ (ಆ.25) ನಿಧನರಾದರು.  


ನಾಡಿನ ಹೆಸರಾಂತ ರಂಗತಜ್ಞ ಕೆ.ಕೆ ಸುವರ್ಣ ಅವರ ಸುಪುತ್ರಿ ಚಂದ್ರಪ್ರಭಾ ಅವರು ಆರಂಭದಲ್ಲಿ ತನ್ನ ತಂದೆಯ ನಾಟಕಗಳಲ್ಲಿ ಅಭಿನಯಿಸಿ ಅನುಭವ ಪಡೆದು ಮರಾಠಿ ನಾಟಕಗಳಲ್ಲಿ ತನ್ನ ಪ್ರತಿಭೆಯನ್ನು ಬಿತ್ತರಿಸಿದರು, ನಂತರ ಹಲವಾರು ತುಳು ಕನ್ನಡ ನಾಟಕಗಳಲ್ಲಿ ತನ್ನ ಅದ್ಭುತವಾದ ನಟನೆಯಿಂದ ಪ್ರೇಕ್ಷಕರ ಮನಸೂರೆ ಗೊಂಡವರು.

ಪ್ರಭಾಕರ್ ಪನ್ಶಿಕರ್ ಅವರ “ತೋ ಮಿ ನವೇಚ್” ಮರಾಠಿ ನಾಟಕದಲ್ಲಿ ಖ್ಯಾತಿ ಪಡೆದ ಚಂದ್ರಪ್ರಭಾ, ಮರಾಠಿಯ ಹಲವಾರು ನಾಟಕ ಮಂಡಳಿಗಳಲ್ಲಿ ಅಭಿನಯಿಸಿದರು, ತುಳು ಕನ್ನಡ ನಾಟಕ ಸಂಸ್ಥೆಗಳಾದ ಕಲಾ ಜಗತ್ತುವಿನ ವಿಜಯ ಕುಮಾರ್ ಶೆಟ್ಟಿ, ಅಭಿನಯ ಮಂಟಪದ ಕರುಣಾಕರ ಕಾಪು, ಅಭಿನಯ ಸಾಮ್ರಾಜ್ಯದ ಜಯರಾಮ್ ಆಳ್ವ, ವೀರ ಕೇಸರಿ ಕಲಾವೃಂದ ಇದರ ರಮೇಶ್ ಶಿವಪುರ, ನವೋದಯದ ಶ್ರೀನಾಥ್ ಮುಲ್ಕಿ, ಉದಯರಂಗ ಅದರ ದೇವುದಾಸ್ ಸಾಲ್ಯಾನ್, ರಂಗಧ್ವನಿಯ ಜಗದೀಶ್ ಕೆಂಚನಕೆರೆ, ಜಗಜ್ಯೋತಿ ಕಲಾವೃಂದ ಅದರ ಸಾ.ದಯಾ ಅವರ ನಿರ್ದೇಶನದಲ್ಲಿ ಹಾಗೂ ಎಸ್.ಎಸ್ ಕಾರ್ಕಳ್, ಬಿ.ಎಂ ವಸಂತ್ ಅವರ ನಿರ್ದೇಶನದಲ್ಲಿ ಮತ್ತು ಹಲವಾರು ತುಳು ಕನ್ನಡಿಗರ ಕಲಾ ಸಂಸ್ಥೆಯಲ್ಲಿ ತನ್ನ ಅಭಿನಯದ ಮುಖೇನ ರಂಗಭೂಮಿಯನ್ನು ಶ್ರೀಮಂತ ಗೊಳಿಸಿದ ಅಪ್ರತಿಮ ಕಲಾವಿದೆ.

ಮುಂಬಯಿ ರಂಗಭೂಮಿಯ ಪ್ರಬುದ್ಧ ಕಲಾವಿದರಾದ ವಾಮನ್ ರಾಜ್, ಸದಾಶಿವ ಸಾಲ್ಯಾನ್, ಭವಾನಿ ಶಂಕರ್ ಶೆಟ್ಟಿ, ಮೋಹನ್ ಮಾರ್ನಾಡ್, ಡಾ| ಸುರೇಂದ್ರ ಕುಮಾರ್ ಹೆಗ್ಡೆ, ಉಮೇಶ್ ಶೆಟ್ಟಿ, ಅಶೋಕ್ ಕಾರ್ನಾಡ್, ಕುಂದ ರೇಗೆ, ಅನಸೂಯಾ , ಹೆಲೆನ್ ಮೊಂತೇರೊ, ಸರೋಜಾದೇವಿ, ಚಂದ್ರಾವತಿ ದೇವಾಡಿಗ, ಜೂಲಿಯೆಟ್ ಪಿರೇರಾ ಮುಂತಾದವರ ಜೊತೆ ಅಬಿನಯಿಸಿದ ಚಂದ್ರಪ್ರಭಾ ಅವರು ಸದಾ ಮನದಲ್ಲಿ ನೆನಪಾಗಿ ಉಳಿಯುವಂತ ಧೀಮಂತ ಪ್ರತೀಭಾವಂತರು. ಹಿರಿಯ ಪತ್ರಕರ್ತ ಶ್ರೀಧರ್ ಉಚ್ಚಿಲ್ ಅವರ ಕಲಾ ಕ್ಷೇತ್ರ ಕಲಾಪ್ರತಿಭೆಗಳ ಸಂಕಲನದಲ್ಲಿ ಪ್ರೇಕ್ಷಕನೇ ಕಲಾವಿದನ ಜೀವಾಳ ಎಂದು ಚಂದ್ರಪ್ರಭಾ ಉದ್ಯಾವರ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನೂ ಇಇಲಿ ನೆನಪಿಸಿ ಕೊಳ್ಳಬಹುದು.

ಚಂದ್ರಪ್ರಭಾ ಅವರ ರಂಗಭೂಮಿಯ ಮೇಲಿನ ಪ್ರೀತಿ, ಬದ್ಧತೆ, ಅಭಿನಯದಲ್ಲಿನ ಅವರ ಸಹಜತೆ, ಸಹ ನಟರೊಡನೆ ಅವರ ಆತ್ಮಿಯತೆಯನ್ನು ಎಂದಿಗೂ ಮರೆಯಲಾಗದು. ಅವರ ಅಕಾಲಿಕ ಆಗಲಿಕೆ ರಂಗಭೂಮಿಗೆ, ರಂಗ ಸಂಸ್ಥೆಗೆ, ಪ್ರೇಕ್ಷಕ ವರ್ಗಕ್ಕೆ ತುಂಬಲಾರದ ನಷ್ಟ. ಅವರ ಪವಿತ್ರ ದಿವ್ಯಾತ್ಮಕ್ಕೆ ಪರಮಾತ್ಮನು ಚಿರಶಾಂತಿ, ಸದ್ಗತಿಯನ್ನು ನೀಡಲಿ. ಅವರ ಮಕ್ಕಳಿಗೆ ಕುಟುಂಬದವರಿಗೆ ಅವರನ್ನು ಅಗಲಿದ ದುಃಖವನ್ನು ಸಹಿಸುವಂತಹ ಶಕ್ತಿ ಶ್ರೀ ದೇವರು ಕರುಣಿಸಲಿ ಎಂದು ಮುಂಬಯಿ ಕಲಾವಿದರ, ಪ್ರೇಕ್ಷಕರ, ಕಲಾಸಂಸ್ಥೆಗಳ ವತಿಯಿಂದ ಪ್ರಾಥಿಸಿ ಅಂತರಾಳದ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಸೂಚನೆ:
ಚಂದ್ರಪ್ರಭಾ ಅವರ ಉತ್ತರ ಕ್ರೀಯೆ ದಿನಾಂಕ ೦೬.೦೯.೨೦೨೬ ಆದಿತ್ಯವಾರ ಪೂರ್ವಾಹ್ನ ೧೧.೩೦ ಗಂಟೆಗೆ ಬಿಲ್ಲವ ಭವನ, ಸಾಂತಕ್ರೂಸ್ ಪೂರ್ವ ಇಲ್ಲಿ ನಡೆಯಲಿದೆ. ಕಲಾವಿದ ಬಂಧುಗಳು ಕ್ರಿಯಾಧಿಯಲ್ಲಿ ಭಾಗಿಯಾಗುವರೇ ಮೃತರ ಸುಪುತ್ರಿ ಧನುಶ್ರೀ ಮತ್ತು ಕುಟುಂಬದವ ವಿನಂತಿಸಿದ್ದಾರೆ. ಕಲಾಭಿಮಾನಿ ಬಾಂಧವರೇ ಮುಂಬಯಿ ರಂಗಭೂಮಿ ಕ್ಷೇತ್ರದ ಹಿರಿಯ ಅಕ್ಕ ರಂಗ ಕಲಾವಿದೆ ಶ್ರೀಮತಿ ಚಂದ್ರಪ್ರಭಾ ಸುಧಾಕರ ಉದ್ಯಾವರ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಅಂತಿಮ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸೋಣ ಬನ್ನಿ ಎಂದು ರಂಗಕರ್ಮಿ ರಮೇಶ್ ಶಿವಪುರ ಈ ಮೂಲಕ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *