ಬಂಟ್ವಾಳ: ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ-ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುವುದೇ ಅವರಿಗೆ ಸಲ್ಲಿಸುವ ಶ್ರೇಷ್ಠ ಗುರುದಕ್ಷಿಣೆಯಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದ್ದಾರೆ.

ಬಂಟ್ವಾಳ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬಂಟ್ವಾಳ ಆಡಳಿತ ಸೌಧದಲ್ಲಿ ಶುಕ್ರವಾರ ಆಯೋಜಿಸಿದ್ದ ಬಂಟ್ವಾಳ ತಾಲೂಕು ಮಟ್ಟದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಸಂಘರ್ಷಕ್ಕೆ ಅವಕಾಶ ನೀಡದೆ ಅಹಿಂಸೆಯ ಮಾರ್ಗದ ಮೂಲಕ ಪರಿವರ್ತನೆ ತಂದ ಮಹಾನ್ ಸಮಾಜ ಸುಧಾರಕರಲ್ಲಿ ನಾರಾಯಣ ಗುರುಗಳು ಪ್ರಮುಖರಾಗಿದ್ದಾರೆ ಎಂದು ಅವರು ಹೇಳಿದರು.
ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ಮುಂದಿನ ದಿನಗಳಲ್ಲಿ ಮಕ್ಕಳಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ,ಆದರ್ಶ ಹಾಗೂ ಸಮಾಜ ಸುಧಾರಣೆಯ ಸಂದೇಶಗಳನ್ನು ಪರಿಚಯಿಸುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ನಾರಾಯಣ ಗುರು ಜಯಂತಿಯಂತಹ ಕಾರ್ಯಕ್ರಮಗಳು ಕೇವಲ ನಾಲ್ಕು ಗೋಡೆಗಳ ಮಧ್ಯೆ ನಡೆದು ಕಾಟಾಚಾರಕ್ಕೆ ಸೀಮಿತಗೊಳಿಸದೆ, ಗುರುಗಳ ತತ್ವ-ಸಂದೇಶಗಳನ್ನು ಸಮಾಜದ ಹೆಚ್ಚಿನ ಜನರಿಗೆ ತಲುಪುವಂತಿರಬೇಕು, ಇಲ್ಲದಿದ್ದಾಗ ಅದು ಗುರುಗಳಿಗೆ ಮಾಡುವ ಅವಮಾನವಾಗುತ್ತದೆ ಎಂದು ಖೇದ ವ್ಯಕ್ತಪಡಿಸಿದರು.
ಪಂಚ ಗ್ಯಾರಂಟಿ ಯೋಜನಾ ಅನುಷ್ಠಾನ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ,ಯುವವಾಹಿನಿ ಅಧ್ಯಕ್ಷ ಕಿರಣ್ ಪೂಜಾರಿ ಪೂಂಜರಕೋಡಿ ಮತ್ತಿತರರು ಉಪಸ್ಥಿತರಿದ್ದರು.
ಉಪತಹಶೀಲ್ದಾರ್ ನವೀನ್ ಬೆಂಜನಪದವು ಸ್ವಾಗತಿಸಿದರು. ತಾಲೂಕು ಕಚೇರಿ ಸಿಬ್ಬಂದಿ ಜನಾರ್ದನ ವಂದಿಸಿದರು
