ಬಂಟ್ವಾಳ: ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ (ರಿ) ಗಾಣದಪಡ್ಪು, ಬಿ.ಸಿ ರೋಡ್ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಲೋಕಾರ್ಪಣೆ, ಗುರು ಪೂಜೋತ್ಸವ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ತುಳು ಚಲನಚಿತ್ರ “ದೇಯಿ ಬೈದೆತಿ” ಉಚಿತ ಪ್ರದರ್ಶನ ಕಾರ್ಯಕ್ರಮವು ಆಗಸ್ಟ್ 30 ರಂದು ನಡೆಯಲಿದೆ ಎಂದು ಸಂಘದ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು‌ ತಿಳಿಸಿದ್ದಾರೆ.

ಗುರುವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಅಂದು ಬೆಳಿಗ್ಗೆ 7 ರಿಂದ 8.30 ರವರೆಗೆ ಭಜನಾ ಸಂಕೀರ್ತನೆ,ಬಳಿಕ‌ ಗುರುಪೂಜೆ, ಮಹಾಪೂಜೆಯ ನಡೆದು,ಬೆ.10.30 ಕ್ಕೆ ಬಿ.ಸಿ.ರೋಡಿನ ಹೃದಯಭಾಗದಲ್ಲಿ ನಿರ್ಮಾಣಗೊಂಡಿರುವ ನೂತನ “ಬ್ರಹ್ಮಶ್ರಿ ನಾರಾಯಣಗುರು ವೃತ್ತದ ಲೋಕಾರ್ಪಣೆಯನ್ನು ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಲೋಕಾರ್ಪಣೆಗೊಳಿಸಲಿದ್ದಾರೆ ಎಂದರು.
ಈ ಸಂಭ್ರಮದ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವರಾದ ಬಿ.ಜನಾರ್ದನ ಪೂಜಾರಿಯವರು ಗೌರವ ಉಪಸ್ಥಿತರಿರುವರು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,ಮಾಜಿ ಸಚಿವ,ಕಾರ್ಕಳ ಶಾಸಕ ಸುನೀಲ್ ಕುಮಾರ್,ಮಾಜಿ ಸಚಿವ ಬಿ.ರಮಾನಾಥ ರೈ,ಬೂಡಾ ಅಧ್ಯಕ್ಷ ಬೇಬಿಕುಂದರ್, ಪುರಸಭೆಯ ಮುಖ್ಯಾಧಿಕಾರಿ ಕೆ.ಬಿ.ತೀರ್ಥ ಪ್ರಸಾದ್ ಅವರು ಅತಿಥಿಗಳಾಗಿ‌ ಭಾಗವಹಿಸಲಿದ್ದಾರೆ.ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಸಭಾಧ್ಯಕ್ಷತೆ ವಹಿಸಲಿದ್ದಾರೆ ಎಂದ ಅವರು
ವೃತ್ತದ ಲೋಕಾರ್ಪಣೆಯ ನಂತರ ಗಣ್ಯರನ್ನು ಅದ್ದೂರಿಯ ಮೆರವಣಿಗೆಯಲ್ಲಿ ಗಾಣದಪಡ್ಪವಿನಲ್ಲಿರುವ‌ ಬ್ರಹ್ಮಶ್ರೀ ನಾರಾಯಣಗುರು ಸಭಾಭವನಕ್ಕೆ ಕರೆತರಲಾಗುವುದು ಎಂದರು.
2016 ರಲ್ಲಿ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ “ಬ್ರಹ್ಮಶ್ರೀ ನಾರಾಯಣಗುರುವೃತ್ತ” ನಿರ್ಮಾಣದ ಕುರಿತಾಗಿ ಸರ್ವಾನುಮತದ ನಿರ್ಣಯವಾಗಿದ್ದು,ಬಳಿಕ ತಾಲೂಕು ಬಿಲ್ಲವ ಸಂಘದ ವತಿಯಿಂದಲೇ ವೃತ್ತವನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಿತ್ತು.ಬಿ.ಸಿ.ರೋಡು– ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಆರಂಭವಾಗುವ ವೇಳೆಗೆ ವೃತ್ತ ತೆರವುಗೊಳಿಸಲಾಗಿತ್ತು.ಆಗ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಲ್ಲಿ ಸಂಘದ ವತಿಯಿಂದ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಸಂಸದರು ಹೆದ್ದಾರಿ ಪ್ರಾಧಿಕಾರದ ವತಿಯಿಂದಲೇ ಬ್ರಹ್ಮಶ್ರೀ ನಾರಾಯಣಗುರು ವೃತ್ತ ನಿರ್ಮಿಸಿಕೊಡುವ ಭರವಸೆ ನೀಡಿದ್ದರು.ಅದರಂತೆ ಸಂಪೂರ್ಣವಾಗಿ ರಾ.ಹೆ.ಪ್ರಾ.ವತಿಯಿಂದ ಸುಮಾರು 40 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಲೋಕಾರ್ಪಣೆಗೆ ಸಿದ್ದಗೊಳ್ಳಿತ್ತಿದೆ ಎಂದರು.
ನಾರಾಯಣ ಗುರುಗಳ ಸಂದೇಶದ 

ಪ್ರಕಾರ ಡಿಸೈನ್ :
“ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತವನ್ನು ನಾರಾಯಣ ಗುರುಗಳ ಸಂದೇಶದ ಪ್ರಕಾರ ಡಿಸೈನ್ ಮಾಡಲಾಗಿದೆ. ಜಾತಿ,ಮತದ ಬಗ್ಗೆ ಜನರಿಗೆ ಜ್ಞಾನೋದಯ ಹಾಗೂ ವಿದ್ಯೆಯಿಂದ ಸ್ವತಂತ್ರ ಎಂಬ ಗುರುಗಳ ಆಶಯದಂತೆ ವೃತ್ತದ ಡಿಸೈನ್ ರೂಪಿಸಲಾಗಿದೆ. ವಿದ್ಯೆ ಅಂದರೆ ಬೆಳಕು ಎಂಬ ಆಧಾರದಲ್ಲಿ ದೀಪದ ಮಾದರಿ ಇದಕ್ಕಾಗಿ ಅಳವಡಿಸಲಾಗಿದೆ. ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ತತ್ವವನ್ನು ದ್ಯೋತಕವಾಗಿಟ್ಟು,ಜ್ಞಾನದ ಸಂಕೇತವಾಗಿ ಬೃಹತ್ ದೀಪವನ್ನು ವೃತ್ತದಲ್ಲಿ ರಚಿಸಲಾಗುತ್ತದೆ ಎಂದು ಹರಿಕೃಷ್ಣ ಬಂಟ್ವಾಳ್ ವಿವರಿಸಿದರು.
ದೇಯಿ ಬೈದೆತಿ ಚಲನಚಿತ್ರ
ಸಭಾಕಾರ್ಯಕ್ರಮದ ಬಳಿಕ ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ 2-00 ಗಂಟೆಯಿಂದ ಚಿತ್ರರಸಿಕರ ಮನಗೆದ್ದ, ತುಳುನಾಡಿನ ಭವ್ಯ ಇತಿಹಾಸ ಹಾಗೂ ಅವಳಿ ವೀರರಾದ ಕೋಟಿ-ಚೆನ್ನಯರ ತಾಯಿಯ ಜೀವನ ಚರಿತ್ರೆಯನ್ನು ಆಧರಿಸಿದ ರಾಜ್ಯ ಪ್ರಶಸ್ತಿ ಪಡೆದ ಪ್ರಸಿದ್ಧ ತುಳು ಚಲನಚಿತ್ರ ‘ದೇಯಿ ಬೈದೆತಿ’ ಸಿನಿಮಾ ಪ್ರದರ್ಶನವು ನಡೆಯಲಿದೆ ಎಂದು ಅವರು ತಿಳಿಸಿದರು.
ಧ್ವಜ,ಪ್ಲಕ್ಸ್ ಗೆ ಅವಕಾಶವಿಲ್ಲ:
ಇನ್ನು‌ಮುಂದೆ ನೂತನ
ಬ್ರಹ್ಮಶ್ರೀ ನಾರಾಯಣ ಗುರುವೃತ್ತಕ್ಕೆ ಯಾವುದೇ ಸಂಘಟನೆಯ ಧ್ವಜ,ಯಾವುದೇ ಪಕ್ಷಕ್ಕೆ ಸೇರಿದ ಪ್ಲೆಕ್ಸ್ ,ಬಂಟಿಂಗ್ಸ್ ಕಟ್ಟಲು ಅವಕಾಶವಿರುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಬಂಟ್ವಾಳ ತಾಲೂಕು ಬಿಲ್ಲವ  ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಅವರು ತಿಳಿಸಿದ್ದು,ಈ ನಿಟ್ಟಿನಲ್ಲಿ ಪುರಸಭೆ,ಪೊಲೀಸ್ ಇಲಾಖೆಗೂ ಮನವಿ ಮಾಡಲಾಗುವುದು ಎಂದು ಹೇಳಿದರು.

ಎನ್ ಜಿ.ವೃತ್ತವಲ್ಲ;

ಈ ವೃತ್ತವನ್ನು ಮುಂದಿನ ದಿನಗಳಲ್ಲಿ‌ ಎನ್ ಜಿ.ವೃತ್ತ ಎಂದು ಬಳಸದೆ ಪೂರ್ತಿಯಾಗಿ “ಬ್ರಹ್ಮಶ್ರೀ ನಾರಾಯಣಗುರು ವೃತ್ತ”ವೆಂದು ಉಲ್ಲೇಖಸಿಸುವಂತೆ ಹರಿಕೃಷ್ಣ ಬಂಟ್ವಾಳ ತಿಳಿಸಿದರಲ್ಲದೆ.ವೃತ್ತ ನಿರ್ಮಾಣಕ್ಕೆ‌ಮುನ್ನ ಸಂಸದ ಕ್ತಾ.ಬ್ರಿಜೇಶ್ ಚೌಟ,ರಾ.ಹೆ.ಪ್ರಾ.ದ ಇಂಜಿನಿಯರ್ ಗಳು,ಡಿಸೈನರ್,ಸಂಘದ ಅಧ್ಯಕ್ಷ ಭುವನೇಶ್ ಹಾಗೂ ತಾನು ಸಹಿತ ಹಲವು ಸುತ್ತಿನ ಚರ್ಚೆ ನಡೆಸಲಾಗಿತ್ತು.ಅದರ ಬಳಿಕವೇ ವೃತ್ತದ ಕಾಮಗಾರಿಗೆ ಮುಂದಡಿ ಇಡಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದರು

By Suddi9

Leave a Reply

Your email address will not be published. Required fields are marked *