ಬಂಟ್ವಾಳ: ಪುದು ಗ್ರಾಮ ಪಂಚಾಯಿತಿ ಹಾಗೂ ಮನಸ್ವಿನಿ ಸಂಜೀವಿನಿ ಒಕ್ಕೂಟದ ಸಹಭಾಗಿತ್ವದಲ್ಲಿ ‘ಆಟಿಡೊಂಜಿ ದಿನ’ ಕಾರ್ಯಕ್ರಮ ಪುದು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ವಿಶಿಷ್ಟವಾಗಿ ನಡೆಯಿತು.
ಆಟಿ ತಿಂಗಳ ಸಂಭ್ರಮವನ್ನು ಸಾಂಪ್ರದಾಯಿಕವಾಗಿ ಆಚರಿಸುವ ಉದ್ದೇಶದಿಂದ ವಿವಿಧ ಆಟಿ ತಿಂಗಳ ವಿಶೇಷ ತಿನಿಸು-ತಿಂಡಿಗಳನ್ನು ಪರಿಚಯಿಸುವುದರೊಂದಿಗೆ, ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಆಚರಣೆಗಳನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಪುದು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಆಟಿ ತಿಂಗಳ ಆಚರಣೆ ನಮ್ಮ ನೆಲದ ಸಂಸ್ಕೃತಿ, ಪರಂಪರೆ ಹಾಗೂ ಜೀವನಶೈಲಿಯ ಪ್ರತೀಕವಾಗಿದೆ. ಹಿಂದಿನ ತಲೆಮಾರುಗಳು ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕುತ್ತಿದ್ದ ರೀತಿಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಉಪಾಧ್ಯಕ್ಷೆ ರುಕ್ಸಾನಾ ಬಾನು, ಮಾಜಿ ಜಿ.ಪಂ.ಸದಸ್ಯ ಉಮ್ಮರ್ ಫಾರೂಕ್, ಒಕ್ಕೂಟದ ಅಧ್ಯಕ್ಷೆ ವಿನಯ, ಪಂಚಾಯಿತಿ ಪಿಡಿಒ ಡಾ. ಸ್ಮೃತಿ ಯು. ಮೇರೆಮಜಲು, ಗ್ರಾ.ಪಂ. ಮಾಜಿ ಅಧ್ಯಕ್ಷೆ ವೃಂದಾ ಪೂಜಾರಿ ಹಾಗೂ ಆರೋಗ್ಯ ಇಲಾಖಾಧಿಕಾರಿ ಪುಟ್ಟರಾಜು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆಟಿ ತಿಂಗಳ ಸಾಂಪ್ರದಾಯಿಕ ತಿನಿಸುಗಳ ಪ್ರದರ್ಶಿಸಲಾಯಿತು.
